ಚಾಮರಾಜನಗರ: ವಿವಿಧ ಇಲಾಖೆ ನಿಗಮಗಳಲ್ಲಿ ವಿಶೇಷಚೇತನರಿಗಾಗಿ ಶೇ.5ರಷ್ಟು ಮೀಸಲಿರುವ ಸೌಲಭ್ಯ ಹಾಗೂ ಅನುದಾನಗಳನ್ನು ಸಮರ್ಪಕವಾಗಿ ವಿಶೇಷಚೇತನರಿಗಾಗಿಯೇ ತಲುಪಿಸಿ ಅನುಕೂಲ ಕಲ್ಪಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ಜಿಲ್ಲಾ ಮಟ್ಟದ ವಿಕಲಚೇತನರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲಾಖೆ ನಿಗಮಗಳಲ್ಲಿ ಸವಲತ್ತುಗಳನ್ನು ನೀಡುವ ಸಂದರ್ಭದಲ್ಲಿ ವಿಶೇಷಚೇತನ ಫಲಾನುಭವಿಗಳಿಗೆ ಶೇ. 5ರಷ್ಟು ಮೀಸಲು ಇರಬೇಕು. ವಿಶೇಷಚೇತನ ಫಲಾನುಭವಿಗಳಿಗೆ ನಿಯಮಾನುಸಾರವಾಗಿ ಎಲ್ಲ ಸೌಲಭ್ಯಗಳು ತಲುಪಬೇಕು. ಪಂಚಾಯತ್ ವ್ಯಾಪ್ತಿಗಳಲ್ಲಿಯೂ ಶೇ. 5ರಷ್ಟು ಅನುದಾನ ವಿಶೇಷಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ವೆಚ್ಚ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ವಿಶೇಷಚೇತನರ ಕುಂದು ಕೊರತೆ ಸಭೆ ಆಯೋಜನೆ ಮಾಡಲಾಗುತ್ತದೆ. ಸಭೆಯಲ್ಲಿ ಪ್ರಸ್ತಾಪಿಸಲಾದ ಹಾಗೂ ಸಲ್ಲಿಸಲಾದ ಮನವಿ ಅಹವಾಲುಗಳಿಗೆ ಮುಂದಿನ ಸಭೆಯ ವೇಳೆಗೆ ಪರಿಹಾರ ಸಿಗಬೇಕು. ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಸಭೆಯಲ್ಲಿ ಚರ್ಚಿತವಾಗುವ ವಿಷಯಗಳನ್ನು ಮನದಟ್ಟು ಮಾಡಿಕೊಂಡು ವಿಶೇಷಚೇತನರಿಗೆ ನೆರವಾಗಬೇಕು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷಚೇತನರಿಗಾಗಿ ಇರುವ ಶೌಚಾಲಯಗಳನ್ನು ತೆರೆದು ಬಳಕೆಗೆ ಅನುವು ಮಾಡಬೇಕು. ಪ್ರತಿನಿತ್ಯ ಸ್ವಚ್ಚತೆ ಕಾರ್ಯ ಕೈಗೊಳ್ಳಬೇಕು. ವಿಶೇಷಚೇತನರಿಗೆ ಅನುಕೂಲವಾಗುವಂತೆ ಜಿಬ್ರಾ ಕ್ರಾಸಿಂಗ್ ನಂತಹ ರಸ್ತೆ ಸಂಚಾರ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ರಿಯಾಯಿತಿ ಬಸ್ಪಾಸ್ಗಳ ವಿತರಣೆಗೆ ಅನುಕೂಲವಾಗುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ವಿಶೇಷಚೇತರಿಗಾಗಿ ತ್ರಿಚಕ್ರ ವಾಹನಗಳು ಎಷ್ಟು ಸಂಖ್ಯೆಯಲ್ಲಿ ಅಗತ್ಯವಿದೆ ಎಂಬ ಬಗ್ಗೆ ಪಟ್ಟಿಯನ್ನು ಅಧಿಕಾರಿಗಳು ನೀಡಬೇಕು. ಎಲ್ಲ ತಾಲೂಕುಗಳ ಫಲಾನುಭವಿಗಳಿಗೆ ಯಾವುದೇ ತಾರತಮ್ಯವಾಗದಂತೆ ಸೌಲಭ್ಯಗಳನ್ನು ತಲುಪಿಸಬೇಕು. ಅರ್ಹರಿಗೆ ಸವಲತ್ತುಗಳು ಸಿಗಬೇಕು. ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಶ್ರವಣದೋಷ ಸೇರಿದಂತೆ ಇನ್ನಿತರ ತೊಂದರೆ ಇರುವವರಿಗೆ ನೀಡಬೇಕಿರುವ ಸಾಧನ ಸಲಕರಣೆ ವಿತರಣೆಗೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದರು.
ಇಲಾಖೆಗಳ ಕಚೇರಿಗಳು ಇನ್ನಿತರೆ ಕಡೆ ವಿಶೇಷಚೇತನರಿಗಾಗಿ ನಿರ್ಮಿಸಲಾಗುವ ರ್ಯಾಂಪ್ ಗಳು ವಿಶೇಷಚೇತನರು ಸುಲಭವಾಗಿ ಪ್ರವೇಶಿಸುವಂತಿರಬೇಕು. ಯುಡಿಐಡಿ ಕಾರ್ಡ್ಗಳ ವಿತರಣೆಯಲ್ಲಿ ಅನಗತ್ಯವಾಗಿ ಅಲೆದಾಡಿಸಬಾರದು. ನಿಗದಿತ ದಿನಾಂಕಗಳAದು ಪರೀಕ್ಷೆ, ತಪಾಸಣೆ ನಡಸಿ ತ್ವರಿತವಾಗಿ ವಿತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ನಿರ್ದೇಶನ ನೀಡಿದರು.
ವಿಶೇಷಚೇತನ ಸಂಘಟನೆಯ ಮುಖಂಡರಾದ ಕುಮಾರ್, ರಮೇಶ್, ಕೃಷ್ಣಮೂರ್ತಿ, ಸಿದ್ದಣ್ಣ, ಮತ್ತಿತ್ತರು ವಿಶೇಷಚೇತನರು ಎದುರಿಸುತ್ತಿರುವ ತೊಂದರೆ ಸಮಸ್ಯೆ ಅಹವಾಲುಗಳನ್ನು ಸಭೆಯಲ್ಲಿ ವಿವರವಾಗಿ ಗಮನಕ್ಕೆ ತಂದರು. ವಿಶೇಷಚೇತನರು ಸಭೆಯಲ್ಲಿ ತಮ್ಮ ಅಹವಾಲುಗಳನ್ನು ನೇರವಾಗಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಹೆಚ್.ಆರ್. ಸುರೇಶ್, ಅಂಗವಿಕಲರ ಕಲ್ಯಾಣಾಧಿಕಾರಿ ಮಂಜುನಾಥ್, ಡಿವೈಎಸ್ಪಿ ಸ್ನೇಹ ರಾಜ್ ಸಭೆಯಲ್ಲಿ ಉಪಸ್ಥಿತರಿದ್ದರು.
ವಿಶೇಷಚೇತನರಿಗಾಗಿ ಮೀಸಲಿರುವ ಶೇ. 5ರಷ್ಟು ಸೌಲಭ್ಯ, ಅನುದಾನಗಳನ್ನು ಸಮರ್ಪಕವಾಗಿ ತಲುಪಿಸಿ: ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ



