ಚಾಮರಾಜನಗರ: ಭೂಮಿಯಲ್ಲಿರುವ ಸಕಲ ಜೀವರಾಶಿಗಳಗೂ ಗಾಳಿ, ನೀರು, ಬೆಳಕು ಅವಶ್ಯವಾಗಿರುವುದರಿಂದ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ತಿಳಿಸಿದರು.
ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಮಾನ್ಸೂನ್ ಸಮಯದಲ್ಲಿ ಆಚರಿಸಲಾಗುತ್ತದೆ. ನಾವು ನಮ್ಮ ಆರೋಗ್ಯದ ಜೊತೆಗೆ ನಮ್ಮ ಸುತ್ತಲಿನ ಪರಿಸರದ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಸ್ವಚ್ಚ ಪರಿಸರದ ಹಾನಿ ಇಂದು ಎಲ್ಲೆಡೆ ಕಂಡುಬರುತ್ತಿದೆ. ಇದಕ್ಕೆ ವ್ಯಕ್ತಿಯ ಬದಲಾದ ಜೀವನಶೈಲಿ ಹಾಗೂ ಯಥೇಚ್ಚವಾಗಿ ಸಂಪನ್ಮೂಲಗಳು ದೊರೆಯುವಿಕೆ ಕಾರಣವಾಗಿದೆ ಎಂದರು.
ಶಬ್ದಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯದಿಂದ ಪರಿಸರ ಹಾಳಾಗುತ್ತಿದೆ. ಯಾರೂ ಸಹ ಪ್ರಕೃತಿಗೆ ವಿರುದ್ಧವಾಗಿ ಹೋಗಬಾರದು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪರಿಸರದಿಂದ ಪ್ರತಿಯೊಬ್ಬರಿಗೂ ಉತ್ತಮಆರೋಗ್ಯ ದೊರೆಯಲಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಗಿಡ, ಮರಗಳನ್ನು ನೆಟ್ಟು ಪೋಷಿಸ
ಬೇಕು. ಇರುವುದೊಂದೆ ಭೂಮಿಯಾಗಿರುವು ದರಿಂದ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ನೀಡಲು ಎಲ್ಲರೂ ಪರಿಸರ ಸಂರಕ್ಷಣೆ ಮುಂದಾಗುವಂತೆ ಡಾ. ಚಿದಂಬರ ಅವರು ಕಿವಿಮಾತು ಹೇಳಿದರು.
ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ರವಿ ಅವರು ಮಾತನಾಡಿ ವಿಶ್ವಸಂಸ್ಥೆಯು ಪರಿಸರದ ಮಹತ್ವವನ್ನು ಮನಗಂಡು 1972ರಲ್ಲಿ ಪರಿಸರ ಉಳಿವಿಗೆ ನಿರ್ಣಯ ಕೈಗೊಂಡಿತು. 1973ರಿಂದ ಇಂದಿನವರೆಗೂ ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬದಂದು ಒಂದೊಂದು ಗಿಡ ನೆಡುವ ಮೂಲಕ ಪರಿಸರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಗಿಡಗಳನ್ನು ಯಥೇಚ್ಚವಾಗಿ ಬೆಳೆಸುವ ಸಲುವಾಗಿ ಅರಣ್ಯ ಇಲಾಖೆಯಿಂದ ರೈತಾಪಿ ಜನರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಾಜೇಶ್ಕುಮಾರ್, ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್, ತಾಲೂಕು ವೈದ್ಯಾಧಿಕಾರಿ ಡಾ. ಅಲಿಂ ಪಾಶ, ನೇನೇಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಹಮದ್ ಸೌದ್, ಶಾಲಾ ಶಿಕ್ಷಕರಾದ ಪ್ರಭುಸ್ವಾಮಿ, ನಾಗೇಂದ್ರ, ಆರೋಗ್ಯ ಮತ್ತು ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್, ಹಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ದ್ವಾರಕೀಶ್, ಹಿರಿಯ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ವೆಂಕಟೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭಾಸ್ಕರ್, ಆಶಾ ಕಾರ್ಯಕಾರ್ತೆಯರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವಿಶ್ವ ಪರಿಸರ ದಿನ ಅಂಗವಾಗಿ ಕಾರ್ಯಕ್ರಮದ ಆರಂಭದಲ್ಲಿ ನೇನೇಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗಣ್ಯರು ಗಿಡ ನೆಟ್ಟು ನೀರೆರೆದರು.