ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಪಶು ಆಸ್ಪತ್ರೆ ಕಟ್ಟಡವನ್ನು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಇಂದು ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಪಶು ಆಸ್ಪತ್ರೆ ಸೇವೆ ಸಮರ್ಪಕವಾಗಿ ಉಪಯೋಗವಾಗಲಿ.
ಎಲ್ಲಿ ಪಶು ಆಸ್ಪತ್ರೆ ಅಗತ್ಯತೆ ಕಡಿಮೆಯಾಗಿದೆ ಎಂಬ ಬಗ್ಗೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಅಗತ್ಯವಿರುವ ಕಡೆ ಪಶು ಆಸ್ಪತ್ರೆಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದರು.ಹಾಲಿಗೆ 3 ರೂ. ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದು ಇದು ನೇರವಾಗಿ ರೈತರಿಗೆ, ಹೈನುಗಾರಿಕೆ ಅವಲಂಬಿತರಿಗೆ ತಲುಪುತ್ತಿದೆ. ಬರಗಾಲ ಹಿನ್ನೆಲೆಯಲ್ಲಿ ನೀರು ಸೌಲಭ್ಯ ಇರುವ ಕಡೆ ಮೇವಿನ ಬೀಜದ ಕಿಟ್ ಒದಗಿಸಲಾಗುತ್ತಿದೆ. ಪಶುಪಾಲನಾ ಇಲಾಖೆ ಸಿಬ್ಬಂದಿ ಕೊರತೆಯನ್ನು ಹಂತ ಹಂತವಾಗಿ ನೀಗಿಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಪಶು ಆಸ್ಪತ್ರೆ ವೈದ್ಯರುಗಳ ನೇಮಕ ಆಗಬೇಕಿದೆ. ತಾಂತ್ರಿಕ ತಜ್ಞರ ನಿಯೋಜನೆಯು ಮಾಡಬೇಕಿದೆ. ರಾಸುಗಳ ಅನುಕೂಲಕ್ಕಾಗಿ ಆಸ್ಪತ್ರೆ ನಿರ್ಮಾಣವಾಗಿದೆ. ಪರಿಪೂರ್ಣವಾಗಿ ಎಲ್ಲ ಸೌಲಭ್ಯಗಳು ಲಭ್ಯವಾದರೆ ಮತ್ತಷ್ಟು ನೆರವಾಗಲಿದೆ ಎಂದರು.
ಇದೇ ವೇಳೆ ಮೇವಿನ ಬೀಜದ ಕಿಟ್ಗಳನ್ನು ರೈತರಿಗೆ ವಿತರಿಸಲಾಯಿತು.ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ಮಹೇಶ್, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರಾದ ಹನುಮೇಗೌಡ, ನಗರಸಭಾ ಸದಸ್ಯರು, ಇತರೆ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.