ಕನಕಪುರ: ರೈತ ಪರ ಹೋರಾಟದ ಮಹತ್ವ ಹಾಗೂ ಮುಂದಿನ ಹೋರಾಟಗಳ ಬಗ್ಗೆ ರೈತರನ್ನು ಎಚ್ಚರಿಸಲು ಜಿಲ್ಲಾ ಮಟ್ಟದ ರೈತ ಸಮಾವೇಶವನ್ನು ನವೆಂಬರ್ 21 ರಂದು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದೇವರಾಜು ತಿಳಿಸಿದರು.
ನಗರದ ಬೂದಿಕೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿದ ಅವರು ಆಳುವ ಸರ್ಕಾರಗಳು ಕೈಗೊಳ್ಳುವ ರೈತ ವಿರೋಧಿ ನೀತಿಗಳ ಬಗ್ಗೆ ಯಾವ ರೀತಿ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕು ನಮ್ಮ ರೈತರ ಕುಂದು ಕೊರತೆ ಸಮಸ್ಯೆ ಗಳನ್ನು ಯಾವ ರೀತಿ ಬಗೆಹರಿಸಿಕೊಳ್ಳಬೇಕು.
ರೈತ ಸಂಘ ದ ಹೋರಾಟ ಮತ್ತು ಅದರ ಹಿನ್ನೆಲೆ ಬಗ್ಗೆ ರೈತ ಹೋರಾಟ ಗಾರರಿಗೆ ಮಾರ್ಗದರ್ಶನ ಮತ್ತು ತಿಳುವಳಿಕೆ ನೀಡುವ ಸಲುವಾಗಿ ತಾಲ್ಲೂಕಿನಲ್ಲಿ ಜಿಲ್ಲಾ ಮಟ್ಟದ ರೈತ ಬಂಧುಗಳ ಸಮಾವೇಶವನ್ನು ಇದೇ ತಿಂಗಳು 21 ರಂದು ನಗರದ ರೋಟರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ರೈತ ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ರೈತ ಬಾಂಧವರು ಮತ್ತು ರೈತ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರೈತ ತಾಲೂಕು ಅಧ್ಯಕ್ಷ ಸತೀಶ್ ಮಾತನಾಡಿ ಯಾವ ಸರ್ಕಾರಗಳು ಬಂದರೂ ರೈತರ ಪರವಾದ ನಿಲುವು ಗಳನ್ನು ತೆಗೆದುಕೊಳ್ಳುವುದಿಲ್ಲ,ರೈತ ವಿರೋಧಿ ನೀತಿಗಳ ವಿರುದ್ಧದ ಹೋರಾಟದಿಂದಲೇ ನಮ್ಮ ಹಕ್ಕುಗಳನ್ನು ನಾವು ಪಡೆದುಕೊಳ್ಳಬೇಕಾದರೆ ನಾವು ದೊಡ್ಡ ಮಟ್ಟದಲ್ಲಿ ಸಂಘಟನೆ ಆಗಬೇಕು ರೈತರು ಯಾವ ರೀತಿ ಹೋರಾಟ ಗಳಿಂದ ಸರ್ಕಾರಕ್ಕೆ ಚಾಟಿ ಬೀಸಬಹುದು ಯಾವ ರೀತಿ ರೈತ ಸಂಘವನ್ನು ಸಂಘಟಿಸಬೇಕು.
ಇದರ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ 21ರಂದು ಜಿಲ್ಲಾ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ರಾಜ್ಯ ಅಧ್ಯಕ್ಷರಾದ ಕೆ.ಟಿ. ಗಂಗಾಧರ್, ಪ್ರೊ. ನಂಜುಂಡಸ್ವಾಮಿ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಯವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದು ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅನುಕುಮಾರ್, ಆಂಥೋಣಿ ರಾಜ್,ಶಿವಗೂಳಿಗೌಡ, ಪುಟ್ಟಸ್ವಾಮಿ,ಮುತ್ತಪ್ಪ, ಮಾದಪ್ಪ, ಶಿವಲಿಂಗು, ರಾಘವೇಂದ್ರ, ಎಚ್. ಕೆ.ಕೃಷ್ನಪ್ಪ, ಕೃಷ್ಣ ನಾಯಕ್, ಚಿಕ್ಕಣ್ಣ, ಮನು ಪ್ರಸಾದ್, ಮಹದೇವಯ್ಯ, ಶಿವನಂಜು, ಮರಿಗೌಡ, ದಾಸಯ್ಯ, ಕೃಷ್ಣಪ್ಪ, ಮಹಾದೇವ ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.