ಬೆಳಗಾವಿ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಇದ್ದ ಸಿಬಿಐ ತನಿಖೆ ಹಿಂಪಡೆದ ರಾಜ್ಯ ಸರಕಾರದ ಕ್ರಮವನ್ನು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿ ಇಂದು ತರಾಟೆಗೆ ತೆಗೆದುಕೊಂಡರು.ಸರಕಾರದ ಕ್ರಮವನ್ನು ವಿರೋಧಿಸಿ ನಿಲುವಳಿ ಸೂಚನೆ ಮಂಡನೆಗೆ ಪ್ರಯತ್ನಿಸಿದರು. ಪ್ರಕರಣದ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಅವಕಾಶ ನಿರಾಕರಿಸಿದ ಪ್ರಸಂಗ ನಡೆಯಿತು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಅಶೋಕ್ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಕೈಗೊಂಡ ಈ ನಿರ್ಧಾರ ಸಂವಿಧಾನ ಬಾಹಿರ ಕ್ರಮವಾಗಿದೆ. ರಾಜಕೀಯ ದುರುದ್ದೇಶಗಳಿಂದ ಕೂಡಿದೆ ಎಂದು ಹರಿಹಾಯ್ದರು.ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಡಿಕೆ ಶಿವಕುಮಾರ್ ಅವರು ಆದಾಯ ಮೀರಿದ ಆಸ್ತಿ ಗಳಿಸಿದ್ದಾರೆ ಎಂಬ ಆರೋಪಗಳ ಮೇರೆಗೆ 2019 ರ ಸೆಪ್ಟೆಂಬರ್25 ರಂದು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಒಮ್ಮೆ ತನಿಖೆಗೆ ನೀಡಿದ್ದ ಪ್ರಕರಣವನ್ನು ಹಿಂದೆ ಪಡೆಯಲು ಬರುವುದಿಲ್ಲ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ ಸರಕಾರ ಇದೇ ರೀತಿ ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಅವರುಗಳ ವಿರುದ್ಧದ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿತ್ತು. ಬಳಿಕ ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಆ ಪ್ರಕರಣಗಳನ್ನು ಹಿಂಪಡೆಯುವ ಕೆಲಸ ಮಾಡಲಿಲ್ಲ. ಈ ಸರಕಾರ ತಮಗೆ ತೋಚಿದಂತೆ ನಿರ್ಣಯನ್ನು ಕೈಗೊಳ್ಳುವ ಮೂಲಕ ನ್ಯಾಯಾಂಗದ ಕಣ್ಣಿಗೆ ಮಣ್ಣೆರುಚುವ ಕೆಲಸ ಮಾಡಿದೆ ಎಂದೂ ಆರೋಪಿಸಿದರು.
ಇದಕ್ಕೆ ಬಿಜೆಪಿಯ ಎಲ್ಲಾ ಶಾಸಕರು ದನಿಗೂಡಿಸಿ ಈ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ಆದರೆ ಇದಕ್ಕೆ ಒಪ್ಪಂದ ಸ್ಪೀಕರ್ ಖಾದರ್ ಅವರು ಪ್ರಕರಣದ ವಿಚಾರಣೆ ನ್ಯಾಯಾಲಯದ ಮುಂದೆ ಇದೆ ಎಂದು ಹೇಳಿ ಚರ್ಚೆಗೆ ಅವಕಾಶ ನಿರಾಕರಿಸಿದರು.
ವಿಧಾನಪರಿಷತ್ನಲ್ಲಿಯೂ ಇದೇ ವಿಷಯ ಪ್ರಸ್ತಾಪವಾಗಿ ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿಯವರು ಮಾತನಾಡಿ, ಡಿಕೆಶಿವಕುಮಾರ್ ಸಿಬಿಐ ಕೇಸ್ ವಾಪಸ್ ಪಡೆದ ವಿಚಾರಕ್ಕೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ನಿಯಮ 59 ರ ಅಡಿ ಚರ್ಚೆಗೆ ಕೊಡುವಂತೆ ಆಗ್ರಹಪಡಿಸಿದರು.
ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಡಿಕೆಶಿ ಸಿಬಿಐ ಕೇಸ್ ವಾಪಸ್ ಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ, ಚರ್ಚೆ ಮಾಡುವುದಕ್ಕೆ ಅವಕಾಶ ನೀಡಬೇಕಾಗಿ ಮನವಿ ಮಾಡಿದರು.ಇದೊಂದು ಗಂಭೀರ ಪ್ರಕರಣ, ಯಾವ ಒತ್ತಡಕ್ಕೆ ಸಿಲುಕಿ ಕಾನೂನಿನ ಬಗ್ಗೆ ಪರಿಜ್ಞಾನ ಇಲ್ಲದೇ ಮಾಡಿದ್ದಾರೆ. ಇವರೊಬ್ಬ ಸಾಮಾನ್ಯ ವ್ಯಕ್ತಿ ಅಲ್ಲ ಚರ್ಚೆಗೆ ಅವಕಾಶ ನೀಡಿ ಎಂದರು.
ಕಾನೂನು ಸಚಿವರು ಇದಕ್ಕೆ ಅಭಿಪ್ರಾಯ ನೀಡಿ ಎಂದ ಸಭಾಪತಿ ಹೊರಟ್ಟಿ ಕೇಳಿದಾಗ ಕಾನೂನು ಸಚಿವ ಎಚ್ ಕೆ ಪಾಟೀಲ್ ಉತ್ತರ ನೀಡಿ, ಬಿಜೆಪಿ ಇದನ್ನು ನಿಲುವಳಿ ಸೂಚನೆಗೆ ಎತ್ತಿಕೊಂಡಿದ್ದೇ ತಪ್ಪು, ಯಾವ ವಿಚಾರ ಕೋರ್ಟ್ ನಲ್ಲಿದೆಯೋ ಅದನ್ನೇ ಚರ್ಚೆಗೆ ತಂದರೆ ಹೇಗೆ? ಎಂದು ಪ್ರಶ್ನಿಸಿದರು.
ನಿಮ್ಮ ಪಕ್ಷದವರೇ ಕೋರ್ಟ್ ಗೆ ಹೋಗ್ತಾರೆ. ನೈತಿಕವಾಗಿ ತಾಂತ್ರಿಕವಾಗಿ ಕಾನೂನಾತ್ಮಕವಾಗಿ ನಿಲುವಳಿ ನೀಡಿದ್ದು ಸರಿಯಲ್ಲ ಇದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. ಕೋರ್ಟ್ ನಲ್ಲಿ ಪ್ರಕರಣ ಬಾಕಿ ಇರುವಾಗ ಚರ್ಚೆಗೆ ಅವಕಾಶ ನೀಡುವುದಿಲ್ಲ, ಇದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ರೂಲಿಂಗ್ ನೀಡಿದ ಸಭಾಪತಿ ಹೊರಟ್ಟಿ ಇದನ್ನು ಒಪ್ಪದೇ ಚರ್ಚೆಗೆ ನೀಡುವಂತೆ ಬಿಜೆಪಿ ಸದಸ್ಯರು ಆಗ್ರಹಪಡಿಸಿದರು.