ಮಾಗಡಿ: ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿಗೆ ಶಾಶ್ವತವಾಗಿ ನೀರಾವರಿ ಯೋಜನೆಯನ್ನು ನೀಡಬೇಕೆಂಬ ನಮ್ಮ ಕನಸು ಇಂದು ನನಸಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ.ಸುರೇಶ್ ಹೇಳಿದರು.ತಾಲ್ಲೂಕಿನ ವೈ ಜಿ ಗುಡ್ಡ ಜಲಾಶಯಕ್ಕೆ ಕಾವೇರಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ವೈ.ಜಿ.ಗುಡ್ಡ ಕೆರೆಯನ್ನು ನೀರಾವರಿ ತಜ್ಞರಾದ ಟಿ.ಎ.ರಂಗಯ್ಯ ಮತ್ತು ಮಾಜಿ ಸಚಿವರಾದ ಹೆಚ್.ಜಿ.ಚನ್ನಪ್ಪ ಕಟ್ಟಿಸಿದ ಇತಿಹಾಸವಿದೆ.
ಈ ಕೆರೆಗೆ ಕಾವೇರಿ ನೀರು ತುಂಬಿಸಿ ಶಾಶ್ವತ ನೀರಾವರಿ ಯೋಜನೆಯನ್ನು ನೀಡಬೇಕೆಂಬ ಮಹದಾಸೆಯೊಂದಿಗೆ ಐದು ವರ್ಷಗಳ ಹಿಂದೆ ನಾನು ಜೆ.ಪಿ.ಚಂದ್ರೇಗೌಡ ಹೆಚ್.ಎನ್.ಅಶೋಕ್ ಇನ್ನಿಬ್ಬರು ಮುಖಂಡರು ವೀಕ್ಷಣೆ ಮಾಡಿ ಈ ಹಿಂದೆ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರ ಬಳಿಯಲ್ಲಿ ಚರ್ಚಿಸಿ ಅವರ ಸಹಕಾರದಿಂದ ಇಂದು ಕಾವೇರಿ ನದಿಯ ನೀರು ಮಂಚನಬೆಲೆ ಮತ್ತು ವೈ.ಜಿ.ಗುಡ್ಡ ಜಲಾಶಯಕ್ಕೆ ಹರಿದು ಬರಲು ಸಾಧ್ಯವಾಗಲು ಕಾರಣವಾಯಿತು.
ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕುಣಿಗಲ್ ಕೆರೆಗೆ ಶ್ರೀರಂಗ ಯೋಜನೆಯಡಿಯಲ್ಲಿ ನೀರು ಹರಿಸಲಾಗುತ್ತಿದೆ. ಆನೇಕಲ್ ಕ್ಷೇತ್ರಕ್ಕೆ ನೀರಾವರಿಗೆ ಶ್ರಮಿಸಿದ್ದೇನೆ. ಭೈರಮಂಗಲ ಕೆರೆ ಶುದ್ದೀಕರಣ,ದೊಡ್ಡಬೆಲೆಯಿಂದ ಬಿಡದಿ ಕಸಬಾ ಹೋಬಳಿಗೆ ನೀರು ಹರಿಸುವ ಯೋಜನೆ ನಮ್ಮದು. ಚನ್ನಪಟ್ಟಣಕ್ಕೆ ನೀರು ಹರಿಸಿದ್ದು ಯೋಗೇಶ್ವರ್ ಜೆಡಿಎಸ್ ಪಕ್ಷದ ನಾಯಕರದಲ್ಲ ಎಂದ ಅವರು ದೇವೇಗೌಡರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಯೋಜನೆಗೆ ತಮ್ಮ ಚಿತ್ತ ಹರಿಸಲಿಲ್ಲ. ಇವರು ಕೇವಲ ಮಾದ್ಯಮದವರ ಮುಂದೆ ಬಿಟ್ಟಿ ಪ್ರಚಾರ ತೆಗೆದುಕೊಳ್ಳುವುದನ್ನು ಹೊರತುಪಡಿಸಿದರೆ ಬೇರೇನೂ ಇಲ್ಲ ಎಂದು ಸುರೇಶ್ ವಾಗ್ದಾಳಿ ನಡೆಸಿದರು.
ವೈ.ಜಿ.ಗುಡ್ಡದಿಂದ ಪ್ರಸ್ತುತ ನಗರಕಲ್ಲುದೊಡ್ಡಿ, ಕೊಟ್ಟಗಾರಹಳ್ಳಿ, ತಿರುಮದೊಡ್ಡಿ, ನೇರಳವಾಡಿ ಕೆರೆಗಳಿಗೆ ನೀರು ಹರಿಯಲಿದೆ.ಮಂಚನಬೆಲೆಯಿಂದ 19 ಕೆರೆಗಳು ತುಂಬಲು 15 ಕೋಟಿ ರೂ ಬೇಕಾಗುತ್ತದೆ. ವೈ.ಜಿ.ಗುಡ್ಡ ಜಲಾಶಯದಿಂದ 30 ಕೆರೆಗಳು ತುಂಬಲು 35 ಕೋಟಿ ಅವಶ್ಯಕತೆಯಿದ್ದು ಈ ಸಂಬಂಧ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರಲ್ಲಿ ಚರ್ಚಿಸಲಾಗಿದ್ದು ಡಿ.ಪಿ.ಆರ್.ತಯಾರಿಸಲು ಅವರು ಸೂಚಿಸಿದ್ದು ಮುಂದಿನ ಬಜೆಟ್ಟಿನಲ್ಲಿ ಇದಕ್ಕೆ ಅನುಮೋದನೆ ಸಿಗಲಿದೆ.ಮಂಚನಬೆಲೆ ಮೇಲ್ಬಾಗದಲ್ಲಿ ಭೂಮಿ ಕಳೆದುಕೊಂಡಿರುವ ರೈತರ 2 ಸಾವಿರ ಎಕರೆ ಜಮೀನಿಗೆ ಸುಮಾರು 56 ಕೋಟಿ ವೆಚ್ಚದಲ್ಲಿ ಪೈಪ್ ಜಂಕ್ಷನ್ ಮೂಲಕ ನೀರು ಕೊಡಲು ಚಿಂತನೆ ನಡೆಸಿದ್ದು ಶಾಶ್ವತ ಪರಿಹಾರ ನೀಡಲು ನಾವು ಬದ್ದರಾಗಿರುವುದಾಗಿ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದರು.
ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಮಾತನಾಡಿ ಇಂದು ಸತ್ಯಗಾಲದಿಂದ ಕಾವೇರಿ ನೀರು ವೈ.ಜಿ.ಗುಡ್ಡ ಮಂಚನಬೆಲೆಗೆ ಹರಿಯುತ್ತಿದೆ ಅದಕ್ಕೆ ಡಿ.ಕೆ.ಸುರೇಶ್ ಅವರ ಪರಿಶ್ರಮ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಸತ್ಯಗಾಲ ಎಲ್ಲಿದೆ ಎಂದು ಜೆಡಿಎಸ್ ನಾಯಕರಿಗೆ ಗೊತ್ತೇ ಇರಲಿಕ್ಕಿಲ್ಲ.ನಮ್ಮ ಭಾಗದಲ್ಲಿ ಎಂ.ವಿ.ಚಂದ್ರಶೇಖರಮೂರ್ತಿ, ಜಾಫರ್ ಷರೀಫ್, ದೇವೇಗೌಡರು, ತೇಜಶ್ವಿನಿರಮೇಶ್, ಕುಮಾರಸ್ವಾಮಿ ಎಲ್ಲರೂ ಲೋಕಸಭಾ ಸದಸ್ಯರಾಗಿದ್ದಾರೆ. ಲೋಕಸಭಾ ಸದಸ್ಯರು ಎಂದರೆ ಕೇವಲ ಐದು ವರ್ಷಕ್ಕೊಮ್ಮೆ ಚುನಾವಣೆಗೋಸ್ಕರವಾಗಿ ಬಂದು ಹೋಗುವಂತಹ ಕಾಲಘಟ್ಟದಲ್ಲಿ ಇಂದು ಸಂಸದರಾದ ಡಿ.ಕೆ.ಸುರೇಶ್ ಅವರು ಒಂದು ಗ್ರಾಪಂ ಮಟ್ಟದಲ್ಲಿ ಬಂದು ಸಾಮಾನ್ಯ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ವೈ.ಜಿ.ಗುಡ್ಡ, ಮಂಚನಬೆಲೆ ಜಲಾಶಯಕ್ಕೆ ಕಾವೇರಿ ನೀರು ಹರಿಸುವ ಮೂಲಕ ಶಾಶ್ವತ ನೀರಾವರಿ ಯೋಜನೆಗೆ ಶ್ರಮಿಸಿರುವ ಅವರನ್ನು ಮತ್ತೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದರೆ ಈ ತಾಲ್ಲೂಕಿನಲ್ಲಿ ನಾನು ಮತ್ತು ಅವರು ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ.ಕೇವಲ ಜಾತಿ ವ್ಯಾಮೋಹನ್ನಿಟ್ಟುಕೊಂಡು ಮತ ಯಾಚಿಸಲು ಬರುವವರು ಬೇಕೋ ಅಭಿವೃದ್ಧಿ ಬೇಕೋ ಎಂದು ಈ ತಾಲ್ಲೂಕಿನ ಜನರೇ ತೀರ್ಮಾನಿಸಬೇಕು ಎಂದು ಬಾಲಕೃಷ್ಣ ವಿವರಿಸಿದರು.
ಕಾವೇರಿ ನೀರಾವರಿ ನಿಗಮದ ಚೀಫ್ ಎಂಜಿನಿಯರ್ ವೆಂಕಟೇಶ್, ಇ.ಇ.ಮೋಹನ್, ಉಪ ತಹಶೀಲ್ದಾರ್ ಶರತ್ ಕುಮಾರ್, ತಾಪಂ ಇಒ ಚಂದ್ರು, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ,ಹೆಚ್.ಎಂ.ಕೃಷ್ಣಮೂರ್ತಿ, ದಿಶಾಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಜಿಪಂ ಮಾಜಿ ಸದಸ್ಯರಾದ ಚಂದ್ರಮ್ಮ ನಂಜಯ್ಯ, ವಿಜಯಣ್ಣ, ಗುತ್ತಿಗೆದಾರರಾದ ಕೆಂಪರಾಜು, ನಂಜಯ್ಯ, ಶಂಕರ್, ತಾಪಂ ಮಾಜಿ ಅಧ್ಯಕ್ಷರಾದ ಬಿ.ಟಿ.ವೆಂಕಟೇಶ್, ಕಾಂತರಾಜು, ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಧನಂಜಯನಾಯಕ್, ಮಾಜಿ ಸದಸ್ಯೆ ಸುಮಾರಮೇಶ್, ಭೂ ಬ್ಯಾಂಕ್ ನಿರ್ದೇಶಕ ಚಕ್ರಬಾವಿ ಸುದೀಂದ್ರ,ಕೋರಮಂಗಲ ಶ್ರೀನಿವಾಸ್, ಆಗಲಕೋಟೆ ಗ್ರಾಪಂ ಅದ್ಯಕ್ಷ ಸಿ.ಕುಮಾರ್, ಮತ್ತೀಕೆರೆ ಗ್ರಾಪಂ ಅದ್ಯಕ್ಷ ಕೃಷ್ಣಪ್ಪ,ಸಾತನೂರು ಗ್ರಾಪಂ ಅದ್ಯಕ್ಷ ಮಲ್ಲಿಕಾರ್ಜುನ್, ಕೆ.ಇ.ಬಿ.ರಾಮಕೃಷ್ಣಪ್ಪ, ಮುಖಂಡರಾದ ನಂಜಯ್ಯನಪಾಳ್ಯ ಚಿಕ್ಕಣ್ಣ, ಬಾಳೇನಹಳ್ಳಿ ಶಿವಣ್ಣ, ಗೊಲ್ಲರಪಾಳ್ಯ ಜಯರಾಮಣ್ಣ, ಮಹದೇಶ್ವರ ಕಾಲೋನಿ ಕೆಂಪೇಗೌಡ, ಏಳಿಗೇಹಳ್ಳಿ ಗಂಗರಾಜು, ರಾಣಿ ನರಸಿಂಹಯ್ಯ, ಮೂರ್ತಿ ನಾಯಕ್, ಸಿ.ವನಜಾ, ಬಸವೇನಹಳ್ಳಿ ಸುರೇಶ್, ಜ್ಯೋತಿಪಾಳ್ಯ ಪ್ರವೀಣ್, ಆಕಾಶ್ ನಂಜಯ್ಯ, ಮತ್ತೀಕೆರೆ ನಾಗೇಶ್, ರಮೇಶ್, ನವೀನ್, ಪಿಡಿಒ ಪ್ರಭು ಮಹಾಲಿಂಗಯ್ಯ ಸೇರಿದಂತೆ ಮತ್ತಿತರಿದ್ದರು.