ಮಾಗಡಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿ.ಕೆ.ಸುರೇಶ್ ಅವರ ಗೆಲುವು ಸೂರ್ಯ ಚಂದ್ರ ಇರುವಷ್ಟೇ ಸತ್ಯವಾಗಿದ್ದು ಇದಕ್ಕೆ ತಾಲ್ಲೂಕಿನ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕೆಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ ಏರ್ಪಡಿಸಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಡಿ.ಕೆ.ಸುರೇಶ್ ಅವರಿಗೆ ಗೊತ್ತಿಲ್ಲದ ವಿಷಯಗಳಿಲ್ಲ.ರಾಜ್ಯದಲ್ಲಿ ನರೇಗಾವನ್ನು ಸಂಪೂರ್ಣವಾಗಿ ಗ್ರಾಮೀಣ ಮಟ್ಟಕ್ಕೆ ತಲುಪಿಸಿದಂತ ಕೀರ್ತಿ ನಮ್ಮ ನಾಯಕರಾದ ಡಿ.ಕೆ.ಸುರೇಶ್ ಅವರಿಗೆ ಸಲ್ಲುತ್ತದೆ.
ಹಾಗೆಯೇ ನರೇಗಾದ ಪ್ರಯೋಜನವನ್ನು ರೈತರು ಹೇಗೆ ಉಪಯೋಗಿಸಿ ಕೊಳ್ಳಬಹುದು ಎಂದು ಪತ್ರಗಳ ಮುಖಾಂತರ ಜನಸಾಮಾನ್ಯರಿಗೆ ಪರಿಚಯಿಸಿ ಅನುಕೂಲ ಮಾಡಿಕೊಟ್ಟಿರುವ ನಮ್ಮೆಲ್ಲರ ಕ್ರಿಯಾಶೀಲ ಸಂಸದರಾದ ಡಿ.ಕೆ.ಸುರೇಶ್ ಅವರನ್ನು ನಾವೆಲ್ಲರೂ ಸೇರಿ ಬೂತ್ ಗಳಲ್ಲಿ ಹೆಚ್ಚಿನ ಮತಗಳನ್ನು ಹಾಕಿಸಿ ಮತ್ತೊಮ್ಮೆ ಆಯ್ಕೆ ಮಾಡಿದರೆ ಈ ಕ್ಷೇತ್ರ ಅಭೂತಪೂರ್ವ ಅಭಿವೃದ್ಧಿಯನ್ನು ಮಾಡಲು ಸಾಧ್ಯವಾಗುತ್ತದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಡಿ.ಕೆ.ಸುರೇಶ್ ಅವರನ್ನು ಚುನಾವಣೆಯಲ್ಲಿ ಎದುರಿಸಲು ಸಾಧ್ಯವಾಗದೇ ಕುಮಾರಸ್ವಾಮಿ ಈಸ್ಟ್ ಇಂಡಿಯಾ ಕಂಪನಿಯಂತೆ ಮತ್ತೊಮ್ಮೆ ವ್ಯಾಪಾರಕ್ಕಾಗಿ ಚನ್ನಪಟ್ಟಣ ಬಿಟ್ಟು ಮಂಡ್ಯಗೆ ಹೋಗುತ್ತಿದ್ದಾರೆ. ಮುಂದೆ ಚನ್ನಪಟ್ಟಣದಲ್ಲಿ ನಿಖಿಲ್ ಅವರಿಗೆ ಪಟ್ಟಾಭಿಷೇಕ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸ್ವಾಮಿಮಾನದ ಮತದಾರರು ಇನ್ನೂ ಮುಂದೆಯಾದರು ನಮ್ಮ ಜಿಲ್ಲೆಯ ಸ್ವಾಭಿಮಾನವನ್ನು ಉಳಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರ ನಡೆಯ ವಿರುದ್ಧ ವ್ಯಂಗ್ಯವಾಡಿದರು.
ಕ್ಷೇತ್ರದ ಅಭಿವೃದ್ಧಿ ಮತ್ತು ಸಮಸ್ಯೆಗಳ ವಿಚಾರವಾಗಿ ಮುಖಾಮುಖಿ ಚರ್ಚೆ ನಡೆಯಲಿ:ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷದ ಇಬ್ಬರೂ ಅಭ್ಯರ್ಥಿಗಳನ್ನು ಮಾಧ್ಯಮದವರು ಮುಖಾಮುಖಿ ಕರೆದು ಚರ್ಚೆಗೆ ಮುಂದಾಗಲಿ ನಂತರ ತಿಳಿಯುತ್ತದೆ ಯಾರು ಸಮರ್ಥರು, ಅಸಮರ್ಥರೆಂದು ಎಂದರು.
ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ನಮ್ಮ ಡಿ.ಕೆ.ಸುರೇಶ್ ಅವರು ರಾಜ್ಯದ ಪರವಾಗಿ ಹಲವಾರು ವಿಷಯಗಳ ಬಗ್ಗೆ ಕೇಂದ್ರದಲ್ಲಿ ಧ್ವನಿಯನ್ನು ಎತ್ತಿ ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಹೊಂದಿದ್ದು ಕ್ಷೇತ್ರದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸಿಕೊಂಡರೆ ಕ್ಷೇತ್ರದಲ್ಲಿ ಅಭಿವೃದ್ಧಿ ದಿಕ್ಕನ್ನು ಮತ್ತಷ್ಟು ಬದಲಾಯಿಸಲು ಸಾಧ್ಯವಾಗುತ್ತದೆ ಎಂದರು.
ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹೆಚ್.ಎಂ.ಕೃಷ್ಣಮೂರ್ತಿ ಮಾತನಾಡಿ ಡಿ.ಕೆ.ಸುರೇಶ್ ಅವರ ಕೆಲಸಗಳು ಪ್ರಧಾನಿ ಮೋದಿಯವರಿಂದ ಸಾಮಾನ್ಯ ಜನತೆಯು ತಿರುಗಿ ನೋಡುವಂತೆ ಮಾಡಿದ್ದೆ. ಅಭಿವೃದ್ಧಿಗಳ ಹರಿಕಾರ ಡಿ.ಕೆ.ಸುರೇಶ್ ಅವರ ಗೆಲುವಿಗೆ ನಾವೆಲ್ಲರೂ ಹಗಲಿರುಳು ಶ್ರಮಿಸೋಣ ಎಂದರು.
ಬಮೂಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ನರಸಿಂಹಮೂರ್ತಿ, ಚಂದ್ರೇಗೌಡ, ಮಾಜಿ ಪುರಸಭಾ ಅಧ್ಯಕ್ಷ ಹೆಚ್.ಜೆ.ಪುರುಷೋತ್ತಮ್, ಪೂಜಾರಿಪಾಳ್ಯ ಕೃಷ್ಣಮೂರ್ತಿ, ಗಾಣಕಲ್ ನಟರಾಜ್, ವಿಜಯ್ ಕುಮಾರ್, ಧನಂಜಯ, ಚಿಗಳೂರು ಗಂಗಾಧರ್, ಐಯಂಡಲ್ಲಿ ರಂಗಸ್ವಾಮಿ, ರೆಹಮಾನ್ ಖಾನ್, ಆಗ್ರೋ ಪುರುಷೋತ್ತಮ್, ಧನಂಜಯ ನಾಯ್ಕ, ಕೆಂಪರಾಜು, ಕಲ್ಕೆರೆ ಶಿವಣ್ಣ, ಸುರೇಶ್, ಮಾರೇಗೌಡ, ವನಜಾ, ಪ್ರೇಮಾ, ಶೈಲಜಾ, ಕೆಂಚೇಗೌಡ, ವಿಶ್ವಮ್ಮ, ನಾಗಮ್ಮ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.