ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಅಂತಿಮ ಘಟ್ಟ ತಲುಪುವ ಕಾಲ ಸಮೀಪವಾಗಿದೆ. ಬೆಂಗಳೂರಿನಲ್ಲಿ ಕಳೆದೆರಡು ಮೂರುದಿನಗಳಿಂದ ವಾಸ್ತವ್ಯ ಹೂಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ದೆಹಲಿಯತ್ತ ಪ್ರಯಾಣ ಬೆಳೆಸಿದರು. ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ವಿಮಾನದಲ್ಲಿ ದೆಹಲಿಗೆ ತೆರಳಿದರು. ಸದಾಶಿವನಗರದ ಅವರ ನಿವಾಸದಿಂದ ಹೊರಟ ಖರ್ಗೆ ಅವರೊಂದಿಗೆ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಪ್ರಯಾಣ ಬೆಳೆಸಿದರು. ಕಳೆದೆರಡು ದಿನಗಳಿಂದ ಖರ್ಗೆ ಬೆಂಗಳೂರಿನಲ್ಲಿದ್ದರು ಅತ್ತ ಸುಳಿಯದಿದ್ದ ಡಿ.ಕೆ.ಶಿವಕುಮಾರ್ ಕಾರಿನಲ್ಲಿ ಏರ್ಪೋರ್ಟ್ವರೆಗೂ ಪ್ರಯಾಣ ಬೆಳೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಏರ್ಪೋರ್ಟ್ನ ಗಣ್ಯಾತಿ ಗಣ್ಯರ ವಿಶ್ರಾಂತಿ ಕೊಠಡಿಯಲ್ಲಿ ಖರ್ಗೆಯವರೊಂದಿಗೆ ಡಿ.ಕೆ.ಶಿವಕುಮಾರ್ ಅವರು, ಹಲವು ಕಾಲ ಮಾತುಕತೆ ನಡೆಸಿದ್ದಾರೆ. ಒಟ್ಟಾರೆ ನಾಯಕತ್ವಕ್ಕಾಗಿ ನಡೆಯುತ್ತಿರುವ ಪೈಪೋಟಿ ಅಂತಿಮ ಘಟ್ಟ ತಲುಪುವ ಅಂತ್ಯಕ್ಕೆ ಬಂದಿದೆ. ಇಂದು ಮಧ್ಯಾಹ್ನ ೨.೧೦ರ ಸುಮಾರಿಗೆ ದೆಹಲಿ ತಲುಪುವ ಖರ್ಗೆ ಅವರು ಸಂಜೆವೇಳೆಗೆ ಲೋಕಸಭೆ ವಿಪಕ್ಷ ನಾಯಕ ಕಾಂಗ್ರೆಸ್ನ ಮುಖಂಡ ರಾಹುಲ್ಗಾಂಧಿ ಅವರಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಇವರಿಬ್ಬರ ಮಾತುಕಥೆ ನಂತರ ಮುಂದಿನ ಬೆಳವಣಿಗೆಗಳನ್ನು ಕಾದುನೋಡಬೇಕಿದೆ. ಒಟ್ಟಾರೆ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಪೈಪೋಟಿ ಅಂತಿಮ ಘಟ್ಟ ತಲುಪುವ ಹಂತಕ್ಕೆ ಬಂದಿದೆ.



