ದೊಡ್ಡಬಳ್ಳಾಪುರ: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇಡೀ ಪರಿಸರವನ್ನೇ ನಾಶ ಮಾಡುತ್ತಿದ್ದಾನೆ. ನಗರೀಕರಣದಿಂದ ಪ್ರಕೃತಿಯ ಒಡಲು ಬಗೆದು ಬೆಟ್ಟ-ಗುಡ್ಡಗಳನ್ನು ಕರಗಿಸಿ ಐಷಾರಾಮಿ ಬಂಗಲೆಗಳನ್ನು ಕಟ್ಟಿಕೊಳ್ಳುತ್ತಿದ್ದಾನೆ. ಪರಿಸರದ ಮೇಲಿನ ದಾಳಿಯಿಂದ ಖುತುಗಳು ಏರು ಪೇರಾಗಿ ವಾತಾವರಣದ ತಾಪಮಾನ ಹೆಚ್ಚಾಗಿದೆ. ಕೆರೆ-ಕುಂಟೆಗಳು ಬತ್ತಿ ಹೋಗುತ್ತಿದ್ದು, ಪಶು-ಪಕ್ಷಿಗಳಿಗೆ ಆಹಾಕಾರ ಉಂಟಾಗಿದೆ.
ಇಂತಹದ್ದೆ ಪರಿಸ್ಥಿತಿ ದೊಡ್ಡಬಳ್ಳಾಪುರ ನಗರದಿಂದ ಸುಮಾರು ಮೂರು ಕಿಮೀ ವ್ಯಾಪ್ತಿಯ ತಳಗವಾರದ ಕೆರೆಯಲ್ಲಿ ನಡೆಯುತ್ತಿದೆ.
ಅದು ನವಿಲುಗಳ ಆಶ್ರಯ ತಾಣ.. ಸುತ್ತಮುತ್ತಲಿನ ನಾಲ್ಕಾರು ಗ್ರಾಮಗಳ ನೀರಿನ ಸೆಲೆ..ಕೊಟ್ಯಾಂತರ ರೂಪಾಯಿ ಬೆಲೆಯ ಸಾವಿರಾರು ಜಾಲಿ ಮರಗಳಿರುವ ನಿಸರ್ಗ ಸಂಪತ್ತನ್ನು ಹೊಂದಿದ್ದ ಕೆರೆ, ತಾಲೂಕಿನ ತಳಗವಾರ ಕೆರೆ.,
ಕೆರೆಯ ಒಡಲು ಕರಗುತ್ತಿದೆ, ಮಣ್ಣು ಮಾಫಿಯಾಕ್ಕೆ ಕೆರೆ ಬಲಿಯಾಗುತ್ತಿದೆ. ಕೆರೆಯಲ್ಲಿನ ಮಣ್ಣು ರಾತ್ರೋರಾತ್ರಿ ಬರಿದಾಗುತ್ತಿದೆ, ಕೆರೆಯ ಹೂಳು ತೆಗೆಯುವ ನೆಪದಲ್ಲಿ ಮಣ್ಣಿನ ವ್ಯಾಪಾರಸ್ಥರು ಕೆರೆಯ ಮಣ್ಣನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ.
ಮಣ್ಣಿನ ಕಳ್ಳರ ಹಣ ದಾಹಕ್ಕೆ ಬಲಿಯಾಗುತ್ತಿದೆ ಕೆರೆ:
ತಾಲೂಕಿನ ತಳಗವಾರ ಕೆರೆ 200 ಎಕರೆಗೂ ಹೆಚ್ಚು ಪ್ರದೇಶದ ವಿಸ್ತೀರ್ಣವನ್ನು ಹೊಂದಿರುವ ದೊಡ್ಡ ಕೆರೆ, ಇದು ತಳಗವಾರ, ಕುರುಬರಹಳ್ಳಿ, ಕೊಡಿಗೇನಹಳ್ಳಿ, ಹೊಸಹಳ್ಳಿ, ಮಾದಗೊಂಡನಹಳ್ಳಿಗಳಿಂದ ಸುತ್ತುವರೆದಿರುವ ಸುಂದರವಾದ ಕೆರೆ, ಬೇಸಿಗೆ ಆರಂಭದೊಂದಿಗೆ ಕೆರೆಯಲ್ಲಿ ನೀರು ಖಾಲಿಯಾಗುತ್ತಲೇ ಕೆರೆಯ ಒಡಲು ಬಗೆಯಲು ಕಳ್ಳರು ಮುಂದಾಗಿದ್ದಾರೆ, ಕತ್ತಲಾಗುತ್ತಲೇ ಕೆರೆಗೆ ದಾಳಿ ಮಾಡುವ ಕಳ್ಳರು ಜೆಸಿಬಿಗಳ ಮೂಲಕ ಕೆರೆ ಮಣ್ಣನ್ನು ಅಗೆದು ಲಾರಿಗಳ ಮೂಲಕ ಬೇರೆಡೆ ಸಾಗಿಸುತ್ತಿದ್ದಾರೆ, ಪ್ರತಿ ದಿನ ನೂರಕ್ಕೂ ಹೆಚ್ಚು ಲೋಡ್ ಗಳಷ್ಟು ಮಣ್ಣು ಖಾಸಗಿಯವರಿಗೆ ಮಾರಾಟವಾಗುತ್ತಿದೆ, ತಳಗವಾರ ಕೆರೆ ಸಂರಕ್ಷಣೆಗೆ ಮುಂದಾಗಿರುವ ತಳಗವಾರ ಪುನೀತ್ ಅಕ್ರಮ ಮಣ್ಣು ಸಾಗಣೆಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.
ಕೆರೆಯ ಮಣ್ಣು ತೆಗೆಯಲು ಸಣ್ಣ ನೀರಾವರಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಹಶೀಲ್ದಾರ್ ಕಛೇರಿ ಮತ್ತು ಗ್ರಾಮ ಪಂಚಾಯಿತಿಯಿಂದ ಅನುಮತಿಯನ್ನು ಪಡೆದಿಯಬೇಕು, ಆದರೆ, ಮಣ್ಣಿನ ಕಳ್ಳರು ಯಾವ ಇಲಾಖೆಯಿಂದಲೂ ಅನುಮತಿ ಪಡೆಯದೆ ಅಕ್ರಮವಾಗಿ ಕೆರೆ ಮಣ್ಣನ್ನು ತೆಗೆಯುತ್ತಿದ್ದಾರೆ, ಗ್ರಾಮದ ಯುವಕರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ, ಆದರೆ, ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ.
ಪ್ರತಿ ಲೋಡ್ ಮಣ್ಣು 6 ಸಾವಿರಕ್ಕೆ ಮಾರಾಟವಾಗುತ್ತಿದೆ, ಗ್ರಾಮದ ಸಂಪತ್ತನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಜೊತೆಗೆ ಕೆರೆ ಅಂಗಳದಲ್ಲಿರುವ ಕೋಟ್ಯಾಂತರ ರೂಪಾಯಿಗಳ ಮೌಲ್ಯದ ಸಾವಿರಾರು ಜಾಲಿ ಮರಗಳು ಸಹ ಕಳ್ಳರ ಪಾಲುಗುತ್ತಿದೆ ಎಂದು ಗ್ರಾಮಸ್ಥರಾದ ದಯಾನಂದ್ ಅಕ್ರೋಶ ವ್ಯಕ್ತಪಡಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾನದಂಡದ ಪ್ರಕಾರ ಮೂರು ಅಡಿ ಅಳದಷ್ಟು ಮಾತ್ರ ಮಣ್ಣು ತೆಗೆಯ ಬೇಕು, ಆದರೆ ಮಣ್ಣಿನ ಕಳ್ಳರು 10 ಆಡಿಗಳ ಅಳವಾದ ಗುಂಡಿಗಳನ್ನ ತೋಡಿ ಮಣ್ಣು ತೆಗೆಯುತ್ತಿದ್ದಾರೆ, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವ ಗುಂಡಿಗಳು ಈಜಲು ಬರುವ ಯುವಕರ ಬಲಿ ತೆಗೆದು ಕೊಳ್ಳಲು ಬಾಯ್ತರೆದು ಕಾಯುತ್ತಿವೆ.
ಇತ್ತೀಚೆಗೆ ಅಕ್ಕಪಕ್ಕದ ಗ್ರಾಮದ ಮಕ್ಕಳು ಈಜಲು ಹೋಗಿ ಸಾವಿಗೀಡಾದ ಘಟನೆಗಳು ಸಂಭವಿಸಿವೆ, ಅಕ್ರಮವಾಗಿ ಮಣ್ಣು ತೆಗೆಯುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದರೆ ಜಾಣಕುರುಡರಾಗಿದ್ದಾರೆ ಸಂಬಂಧ ಪಟ್ಟ ಅಧಿಕಾರಿಗಳು.