ದೊಡ್ಡಬಳ್ಳಾಪುರ: ಪ್ಲಾಸ್ಟಿಕ್ ಮುಕ್ತ ಹಾಗೂ ನಿರ್ಮಲ ನಗರ ನಿರ್ಮಾಣ, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ, ಮಳೆ ನೀರು ಕೊಯ್ಲು ವ್ಯವಸ್ಥೆಗೆ ಪ್ರೊತ್ಸಾಹ ಧನ, ಫುಡ್ ಕೋರ್ಟ್ ನಿರ್ಮಾಣ, ರಸ್ತೆ ದುರಸ್ತಿ, ರಸ್ತೆ ವಿಸ್ತರಣೆಗೆ ಒತ್ತು, ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುವ ಮೂಲಕ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ನಗರಸಭೆ ಅದ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ತಿಳಿಸಿದರು.
ನಗರಸಭೆಯಲ್ಲಿ ಬುಧವಾರ 2024-25ನೇ ಸಾಲಿನ ಆಯವ್ಯಯ ವಿಶೇಷ ಸಭೆಯಲ್ಲಿ ಬಜೆಟ್ ಮಂಡಿಸಿದ ಅವರು ಹಿಂದಿನ ಸಾಲಿನ ಉಳಿತಾಯ ರೂ.12. 25 ಕೋಟಿ, ವಿವಿಧ ಮೂಲಗಳಿಂದ ಸಂಗ್ರಹವಾಗುವ ವರಮಾನ ರೂ.54.96 ಕೋಟಿ ಸೇರಿದಂತೆ ಒಟ್ಟು ರೂ. 67.21ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ ಇದರಲ್ಲಿ ರೂ.65.66ಕೋಟಿ ಒಟ್ಟು ಖರ್ಚು ಅಂದಾಜಿಸಲಾಗಿದೆ.ಅದ್ದರಿಂದ ರೂ.1.55ಕೋಟಿ ಉಳಿತಾಯ ಬಜೆಟ್ ಇದಾಗಿದೆ ಎಂದು ತಿಳಿಸಿದರು.
ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ರೂ.5.60 ಕೋಟಿ ನಿಗದಿಪಡಿಸಲಾಗಿದೆ. ಮುಖ್ಯ ಮಂತ್ರಿಗಳ ನಗರೋತ್ಥಾನ ಹಂತ-4 ರ ಯೋಜನೆಯಡಿ ದೊಡ್ಡಬಳ್ಳಾಪುರ ನಗರಸಭೆಗೆ ರೂ.30.00ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ. ನಗರದ ಮಳೆ ನೀರು ಒಳಚರಂಡಿ ಮೂಲಕ ಕೆರೆ ಸೇರುವುದನ್ನು ತಪ್ಪಿಸಲು ರೂ.3 ಕೋಟಿ ವೆಚ್ಚದಲ್ಲಿ ಪ್ರತಿಬಂಧಕ ಹಾಗೂ ತಿರುವು ನಿರ್ಮಾಣಮಾಡಲಾಗುವುದು ಎಂದರು.
ದೊಡ್ಡಬಳ್ಳಾಪುರ ನಗರಸಭೆಯ 2024-25ನೇ ಸಾಲಿನಲ್ಲಿ ಒಟ್ಟು ಆದಾಯ 54.96 ಕೋಟಿ ನಿರೀಕ್ಷಿಸಲಾಗಿದ್ದು, ಈ ಪೈಕಿ ತೆರಿಗೆ ಆದಾಯದಿಂದ 6.23 ಕೋಟಿ ಹಾಗೂ ಇತರೆ ತೆರಿಗೆ ಆದಾಯದಿಂದ 11.63 ಕೋಟಿಯನ್ನ ನಿರೀಕ್ಷೆ ಮಾಡಲಾಗಿದೆ.
ಬಜೆಟ್ ಮುಖ್ಯಾಂಶಗಳು
1. ಪ್ಲಾಸ್ಟಿಕ್ ಮುಕ್ತ ಹಾಗೂ ನಿರ್ಮಲ ದೊಡ್ಡಬಳ್ಳಾಪುರ ನಗರ ನಿರ್ಮಾಣಕ್ಕಾಗಿ ರೂ. ರೂ.50 ಲಕ್ಷಗಳು, 2.ನೀರು ಸರಬರಾಜು ಮತ್ತು ಒಳ ಚರಂಡಿ ಸಂಪರ್ಕಗಳ ವ್ಯವಸ್ಥೆಗಾಗಿ ರೂ.60 ಲಕ್ಷಗಳು, 3.ನಗರದ ವಿವಿಧ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 4.62 ಕೋಟಿ, 4.ನಗರಸಭೆ ಅವರಣದಲ್ಲಿ ಶ್ರೀಕೊಂಗಾಡಿಯಪ್ಪ ರೂ. ನಿರ್ಮಾಣಕ್ಕೆ 20 ಲಕ್ಷಗಳು, 5.ನಗರ ವ್ಯಾಪ್ತಿಯಲ್ಲಿ ವಾಸಿಸುವ ಕ್ರೀಡಾ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ 10 ಲಕ್ಷಗಳು, 6. ಬೀದಿ ದೀಪಗಳ ನಿರ್ವಹಣೆಗಾಗಿ 39.80 ಲಕ್ಷಗಳು, 7.ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ ಬಡ ಜನರ ಕಲ್ಯಾಣಕ್ಕಾಗಿ 72.55 ಲಕ್ಷಗಳು, 8.ಪೌರ ಕಾರ್ಮಿಕರ ಬೆಳಗಿನ ಉಪಹಾರಕ್ಕಾಗಿ ರೂ.15 ಲಕ್ಷಗಳು, 9.ರಾಜ್ಯ ಸರ್ಕಾರದ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ವಸತಿ ರಹಿತ ಪೌರ ಕಾರ್ಮಿಕರಿಗೆ ಗೃಹ ನಿರ್ಮಾಣಕ್ಕಾಗಿ ರೂ.12.25ಕೋಟಿ, 10.ಸ್ಮಶಾನ ಅಭಿವೃದ್ಧಿಗಾಗಿ ರೂ. 15 ಲಕ್ಷಗಳು. ಪ್ರಮುಖ ಐದು ಉದ್ಯಾನ ವನಗಳ ಅಭಿವೃದ್ಧಿ ಹಾಗೂ ಸ್ಮಶಾನ, ಚಿತಾಗಾರ ನಿರ್ಮಾಣ ಸೇರಿದಂತೆ ಹಲವು ಕ್ರಿಯಾಯೋಜನೆಗಳೊಂದಿಗೆ ಬಜೆಟ್ ಮಂಡಿಸಿದರು. ಈ ಸಮಯದಲ್ಲಿ ಬಜೆಟ್ ಕುರಿತು ಮಾತನಾಡಿದ ಕಾಂಗ್ರೆಸ್ ನ ನಗರಸಭಾ ಸದಸ್ಯ ಆನಂದ್ ರಸ್ತೆ ವಿಸ್ತರಣೆ, ಪ್ಲಾಸ್ಟಿಕ್ ಮುಕ್ತ ನಗರ ಸೇರಿದಂತೆ ಹಲವು ವಿಚಾರಗಳು ಕೇವಲ ಪೇಪರ್ ನಲ್ಲಿ ಮಾತ್ರವೇ ಯಾವುದೇ ಪ್ರಯೋಜನವಾಗಿಲ್ಲ, ಸರ್ಕಾರದ ಅನುದಾನವನ್ನು ಮಾತ್ರವೇ ನಂಬುವ ಬದಲು ನಗರಸಭೆಯ ಆದಾಯ ಹೆಚ್ಚಿಸಲು ಸೂಕ್ತ ಕ್ರಮಜರುಗಿಸಬೇಕಾಗಿದೆ ಎಂದರು.
ಇದೇ ರೀತಿ ನಗರಸಭೆ ಸದಸ್ಯ ಮಲ್ಲೇಶ್,ಶಿವಶಂಕರ್,ಎಂ,ಜಿ.ಶ್ರೀನಿವಾಸ್ ಹಾಗೂ ಹಿರಿಯ ಸದಸ್ಯ ತ.ನ.ಪ್ರಭುದೇವ್ ಸಹ ಮಾತನಾಡಿ ವಾಸ್ತವಿಕ ವಿಚಾರಗಳನ್ನು ಮಂಡಿಸುವ ಮೂಲಕ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕೆಂದು ಸಲಹೆ ನೀಡಿದರು
ದೊಡ್ಡಬಳ್ಳಾಪುರ ನಗರ ಸಭೆಯ ಉಪಾಧ್ಯಕ್ಷರಾದ ಫರ್ಹಾನತಾಜ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿಕುಮಾರ್ ವಿ.ಎಸ್, ಪೌರಾಯುಕ್ತರಾದ ಪರಮೇಶ್ ಸೇರಿದಂತೆ ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳಿದ್ದರು.