ಹದಿಹರೆಯ ಅಂದರೆ ಅಡಲೊಸೆಂಟ್ ಏಜ್. ಈ ಪದ “ಅಡೊಲಿಸಿಯರ್” ಎಂಬ ಲ್ಯಾಟಿನ್ ಭಾಷೆಯಿಂದ ಬಂದಿದೆ ಅಂದರೆ ಇದರ ಅರ್ಥ ಪ್ರಬುದ್ಧತೆ, ಪಕ್ವತೆ ಎಂದು.ಈ ವಯಸಿನ ಮಕ್ಕಳೊಂದಿಗೆ ಬಹಳ ಪ್ರೀತಿ ಹಾಗು ಸ್ನೇಹದಿಂದ ಇರಬೇಕು. ಅತಿಯಾದ ಶಿಕ್ಷೆ, ಬೈಯ್ಯುವುದು, ಹೊಡೆಯುವುದು ಮಾಡಿದಾಗ ಇವರ ಮನಸಿನ ಮೇಲೆ ಪರಿಣಾಮದಿಂದ ಅನಾಹುತಗಳೇ ಹೆಚ್ಚಾಗುತ್ತದೆ.
ಹೆಚ್ಚಾಗಿ ಗಂಡು ಮಕ್ಕಳ ಮೇಲೆ ಬಹಳವಾಗಿ ಗಮನಹರಿಸಬೇಕು. ಇಲ್ಲದಿದ್ದರೆ ಅವರು ಮನೆ ಬಿಟ್ಟು ಹೋಗಬಹುದು, ಮದ್ಯವ್ಯಸನಿಗಳಾಗಬಹುದು, ಧೂಮಪಾನ ಅಭ್ಯಾಸವಾಗಬಹುದು.ಇದೆಲ್ಲಕ್ಕಿಂತ ಮಿಗಿಲಾಗಿ ತಂದೆ ತಾಯಿಯ ಮೇಲೆ ದ್ವೇಷ ಮೂಡಿಸಿಕೊಂಡು ಹೊರಗಿನವರಿಂದ ಪ್ರೀತಿ ಬಯಸಿ ಜೀವನ ಹಾಳು ಮಾಡಿಕೊಳ್ಳುವ ಸಂದರ್ಭಗಳೆ ಹೆಚ್ಚು.
ಪೋಷಕರು ಅವರಿಗಾಗಿ ಸಮಯ ಮೀಸಲಿಟ್ಟು ಅವರ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಕೇಳಿ ಅವರ ಮಾತು ಕೇಳಿಸಿಕೊಂಡು ಎಲ್ಲಿ ತಿದ್ದಬೇಕು, ಎಲ್ಲಿ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಈ ವಯಸ್ಸಿನ ಮಕ್ಕಳು ಇಲ್ಲದ್ದನ್ನು, ಬೇಡವಾದದ್ದನ್ನು ಅರಸಿ ಹೋಗುತ್ತಾರೆ, ಇದಕ್ಕೆ ಕಾರಣ ಮನೆಯ ವಾತಾವರಣ.
ಅವರಂತೆ ನಡೆಯದಿದ್ದಾಗ ಎಲ್ಲಿ ತಮ್ಮ ಮಾತಿಗೆ ಮನ್ನಣೆ ಸಿಗುತ್ತದೆಯ ಅಲ್ಲಿ ಹೆಚ್ಚು ಸಮಯ ಕಳೆಯಲು ಶುರು ಮಾಡುತ್ತಾರೆ. ಅವರ ಮನಸು ಅರಿತು ಅವರನ್ನು ಸರಿಯಾದ ಮಾರ್ಗಕ್ಕೆ ತರಲು ಮನೆಯವರ ಸಹಕಾರ ತುಂಬಾ ಅತ್ಯಗತ್ಯ.ಈ ವಯಸಿನಲ್ಲಿ ಹೆಣ್ಣು ಮಕ್ಕಳಿಗೂ ಸಹ ದೈಹಿಕವಾಗಿ ಅನೇಕ ಬದಲಾವಣೆಗಳಾಗುತ್ತದೆ.
ಹಾರ್ಮೋನ್ ಸ್ರವಿಸುವಿಕೆಯಿಂದ ದೇಹದ ಮೇಲೂ ಮನಸಿನ ಮೇಲೂ ಅನೇಕ ಪರಿಣಾಮಗಳಾಗುತ್ತದೆ. ದೇಹದಲ್ಲಿ ಬದಲಾವಣೆ ಕಂಡು ಹೆಣ್ಣು ಮಕ್ಕಳು ಮುಜುಗರ, ಸಂಕೋಚ, ನಾಚಿಕೆ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ. ಸ್ತನಗಳ ಬೆಳವಣಿಗೆ ಆಗುವಾಗ ಅದನ್ನು ಮರೆಮಾಚಿಕೊಳ್ಳಲು ಸಂಕೋಚಗೊಂಡು ಗೂನು ಬೆನ್ನು ಮಾಡಿಕೊಂಡು ನಡೆದಾಡುತ್ತಾರೆ, ಶ್ರಗ್ ಅಥವಾ ಓವರ್ ಕೋಟ್ ಧರಿಸಿಕೊಂಡು ಮರೆಮಾಚಿಕೊಳ್ಳುತ್ತಾರೆ.
ಈ ಸಮಯದಲ್ಲಿ ತಾಯಿ ಅಥವಾ ಹಿರಿ ಅಕ್ಕ ಅವರಿಗೆ ತಿಳಿ ಹೇಳಬೇಕಾಗುತ್ತದೆ. ವಯಸಿನ ಸಹಜ ನಿನ್ನ ದೇಹದಲ್ಲಿ ಬೆಳವಣಿಗೆ ಆಗುತ್ತಿದೆ ಇದು ಸಹಜ ಕ್ರಿಯೆ ಹಾಗಾಗಿ ಮುಜುಗರ ಪಡುವ ಅಗತ್ಯವಿಲ್ಲ ಎಂದು ಅವರಿಗೆ ಸಮಾಧಾನ ಮಾಡಬೇಕು.ಇದೇ ಸಮಯದಲ್ಲಿ ತಿಂಗಳ ಮುಟ್ಟಿನ ಸಮಸ್ಯೆಯಿಂದಲೂ ಬಳಲುತ್ತಾರೆ, ಹೊಟ್ಟೆ ನೋವು, ಕೈಕಾಲು ನೋವು, ಮೈಗ್ರೇನ್ ತಲೆನೋವು ಹೀಗೆ ಹಲವಾರು ಸಮಸ್ಯೆಗಳು ತಲೆತೋರುತ್ತದೆ.
ಇದರಿಂದ ಕೆಲವೊಮ್ಮೆ ಕೆಲವು ಹೆಣ್ಣು ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಕೆಲವರಿಗೆ ಮುಟ್ಟಾದಾಗ ಬಹಳ ರಕ್ತಸ್ರಾವವಾಗಿ ಆಸ್ಪತ್ರೆ ಸೇರಿ ಡ್ರಿಪ್ಸ್ ಹಾಕುವ ಮಟ್ಟಿಗೆ ಉಲ್ಬಣವಾಗುತ್ತದೆ. ಈ ಸಮಸ್ಯೆ ಸಹ ಅವರ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಿ ವಿಚಲಿತಗೊಳ್ಳುವ ಸಂಭವ ಹೆಚ್ಚು. ಇಂತಹ ಮಕ್ಕಳ ಬಗ್ಗೆ ಈ ಸಮಯದಲ್ಲಿ ಬಹಳ ಕಾಳಜಿ ಮುಖ್ಯ. ಮನೆಯ ಸದಸ್ಯರೆಲ್ಲರ ಸಹಕಾರ, ಪ್ರೀತಿ ಬೇಕಾಗುತ್ತದೆ.
ಶಾಲೆ, ಕಾಲೇಜು ತರಗತಿಗಳಿಗೆ ಹಾಜರಾಗದೆ ಪಾಠದಲ್ಲಿಯೂ ಹಿಂದೆ ಉಳಿದುಬಿಡುತ್ತಾರೆ. ಈ ಸಮಯದಲ್ಲಿ ಶಾಲಾ ಶಿಕ್ಷಕರು ಹಾಗು ಸ್ನೇಹಿತರ ಸಹಕಾರ, ಬೆಂಬಲ ಬಹಳ ಅಗತ್ಯ. ಮನೆ ವಾತಾವರಣ, ಶಾಲೆಯ ವಾತಾವರಣ, ಸ್ನೇಹಿತರು, ಅಕ್ಕಪಕ್ಕದವರು, ಸುತ್ತ ಮುತ್ತ ಪರಿಸರದಿಂದ ಬಹಳ ಪ್ರಭಾವಿತರಾಗುತ್ತಾರೆ ಅಥವಾ ಖಿನ್ನತೆಗೆ ಒಳಗಾಗುತ್ತಾರೆ. ಇದು ತಂದೆ ತಾಯಿ ಮಕ್ಕಳಲ್ಲಿ ಬಹಳವಾಗಿ ಗಮನವಿರಿಸಬೇಕಾದ ಸಮಯವಿದು.
-ಚಂಪಾ ಚಿನಿವಾರ್, ಆಪ್ತಸಮಾಲೋಚಕಿ