ಚಾಮರಾಜನಗರ: ಜಿಲ್ಲಾಡಳಿತ, ವಿವಿಧ ಸಂಘ ಸಂಸ್ಥೆಗಳು ಹಾಗೂ ಎಲ್ಲರ ಸಹಕಾರದೊಂದಿಗೆ ಹಸಿರುಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಜಯಂತಿಯನ್ನು ಏಪ್ರಿಲ್ 5ರಂದು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಏಪ್ರಿಲ್ 14ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ಜಿಲ್ಲಾಧಿಕಾರಿ ಶ್ರೀರೂಪ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು, ಕಳೆದ ಬಾರಿ ಅದ್ದೂರಿಯಾಗಿ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗಿದೆ. ಕಾರ್ಯಕ್ರಮದಂದು ಚೆನ್ನಾಗಿ ಅಲಂಕಾರ ಮಾಡಲಾಗಿತ್ತು. ಆದರೆ ಅಂಬೇಡ್ಕರ್ ಜಯಂತಿಯAದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾತಂಡಗಳು ಸಮಾರಂಭದ ವೇದಿಕೆಯವರೆಗೂ ಬರಲಿಲ್ಲ. ಇಂತಹುದಕ್ಕೆ ಈ ಬಾರಿ ಅವಕಾಶವಾಗಬಾರದು. ವೇದಿಕೆಗೆ ಮೆರವಣಿಗೆ ಬರುವವರೆಗೂ ಕಲಾತಂಡಗಳು ಇರಬೇಕು. ಶಿಸ್ತು, ಸಮಯಪ್ರಜ್ಞೆ ಕಾಯ್ದುಕೊಳ್ಳಬೇಕು. ಅಂಬೇಡ್ಕರ್, ಬಾಬುಜಿ ಅವರ ವಿಚಾರಧಾರೆಗಳು ಹೆಚ್ಚು ಜನರಿಗೆ ತಲುಪಬೇಕು ಎಂದರು.
ಕಾರ್ಯಕ್ರಮಗಳ ಸುಗಮ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಇಂತಹ ಸಮಿತಿಗಳಲ್ಲಿ ಸಂಘಟನೆಯ ಮುಖಂಡರು, ಪ್ರತಿನಿಧಿಗಳು, ಪದಾಧಿಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಅಧಿಕಾರೇತರ ಸದಸ್ಯರು ಸಮಿತಿಯಲ್ಲಿ ಇದ್ದು, ಅವರಿಗೂ ಜವಾಬ್ದಾರಿಗಳನ್ನು ನೀಡುವುದರಿಂದ ಮತ್ತಷ್ಟು ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ಇಬ್ಬರು ಮಹನೀಯರ ಜಯಂತಿ ಆಚರಣೆ ಕಾರ್ಯಕ್ರಮಗಳು ನಡೆಯಲಿವೆ. ಅಂಬೇಡ್ಕರ್ ಜಯಂತಿ ಹಿಂದಿನ ದಿನದಂದು ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತ ವಿಚಾರ ಸಂಕಿರಣ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಮತ್ತಷ್ಟು ಅರ್ಥಪೂರ್ಣವಾಗಿ ವಿಚಾರಸಂಕಿರಣ ನಡೆಯಲು ಸಾಧ್ಯವಾಗುತ್ತದೆ ಎಂದು ಮುಖಂಡರು ಹೇಳಿದರು.
ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವವರಿಗೆ ಶುದ್ದ ಕುಡಿಯುವ ನೀರು ಪೂರೈಸಬೇಕು. ಕಾರ್ಯಕ್ರಮಕ್ಕೆ ಎಲ್ಲ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಬೇಕು. ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮೇಲ್ಚಾವಣಿ ಹಾಕಿಸಬೇಕು. ಬಾಬು ಜಗಜೀವನ್ ರಾಮ್ ಅವರ ಪುತ್ಥಳಿಯನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಿಸಲು ಏಪ್ರಿಲ್ 5ರೊಳಗೆ ಭೂಮಿ ಪೂಜೆ ಮಾಡಲು ಕ್ರಮವಹಿಸಬೇಕು. ಬಾಬು ಜಗಜೀವನ್ ರಾಮ್ ಭವನದ ಕಾಮಗಾರಿ ಆರಂಭವಾಗಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಅದ್ದೂರಿಯಾಗಿ ಇಬ್ಬರು ಮಹಾನ್ ನಾಯಕರ ಜಯಂತಿ ಕಾರ್ಯಕ್ರಮ ನಡೆಯಬೇಕು. ಇದಕ್ಕಾಗಿ ನಾವೆಲ್ಲರೂ ಎಲ್ಲ ಬಗೆಯ ಸಹಕಾರ ನೀಡಲಿದ್ದೇವೆ ಎಂದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಎಲ್ಲರ ಸಲಹೆ, ಅಭಿಪ್ರಾಯದಂತೆ ಅದ್ದೂರಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಮ್ ಜಯಂತಿಯನ್ನು ಆಚರಿಸಲಾಗುತ್ತದೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾಗೂ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದರು.
ಈ ಹಿಂದೆ ನಡೆದ ತಪ್ಪುಗಳು ಮರುಕಳಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಕಾರ್ಯಕ್ರಮ ನಿರ್ವಹಣೆಗಾಗಿ ಇರುವ ಸಮಿತಿಗಳಿಗೆ ಮುಖಂಡರು, ಪದಾಧಿಕಾರಿಗಳ ಹೆಸರು ಸೇರ್ಪಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ನಿಮ್ಮೆಲ್ಲರ ಸಹಕಾರದಿಂದ ಕಾರ್ಯಕ್ರಮವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಕೈಗೊಳ್ಳಲಾಗುವುದು ಎಂದರು. ಅಂಬೇಡ್ಕರ್ ಪ್ರತಿಮೆಗೆ ಮೇಲ್ಚಾವಣಿ ನಿರ್ಮಾಣ ಸಂಬಂಧ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಬಾಬು ಜಗಜೀವನ ರಾಮ್ ಪ್ರತಿಮೆ ನಿರ್ಮಾಣಕ್ಕೆ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು ಅವರು ಮಾತನಾಡಿ ಬಾಬು ಜಗಜೀವನ ರಾಮ್ ಜಯಂತಿ, ಡಾ. ಬಿ.ಆರ್. ಅಂಬೇಡ್ಕರ್ ವಿಚಾರಗಳ ಕುರಿತ ವಿಚಾರ ಸಂಕಿರಣ, ಡಾ. ಬಿ.ಆರ್. ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮಕ್ಕೆ ಎಲ್ಲರ ಸಲಹೆ ಅಭಿಪ್ರಾಯ ಅನುಸಾರ ಸಿದ್ದತೆ ಕೈಗೊಳ್ಳಲಾಗುವುದು. ಬಾಬು ಜಗಜೀವನ ರಾಮ್ ಭವನ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ 3 ಕೋಟಿ ರೂ. ಜಮೆ ಮಾಡಲಾಗಿದ್ದು, ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಡಿವೈಎಸ್ಪಿ ಸ್ನೇಹ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ಅರಕಲವಾಡಿ ನಾಗೇಂದ್ರ, ದೊಡ್ಡರಾಯಪೇಟೆ ಸಿದ್ದರಾಜು, ರಾಮಸಮುದ್ರ ಸುರೇಶ್, ಶಿವಣ್ಣ, ಶಿವಮೂರ್ತಿ, ಮಹೇಶ್, ಸಂಘಸೇನ, ವಾಸು, ಹೊಂಗನೂರು ನಟರಾಜು, ಕಂದಹಳ್ಳಿ ನಾರಾಯಣ, ಜಿ. ಬಂಗಾರು, ನಾಗೇಶ್, ಸಿ.ಎಂ. ನರಸಿಂಹಮೂರ್ತಿ, ಬಸವನಪುರ ರಾಜಶೇಖರ್, ಜನಪದ ಮಹೇಶ್, ನಾರಾಯಣ, ಭಾನುಪ್ರಕಾಶ್, ಚಾ.ರಂ. ಶ್ರೀನಿವಾಸಗೌಡ, ಸೂರಜ್, ಪಣ್ಯದಹುಂಡಿ ರಾಜು, ಬಸವರಾಜು, ಬೆಳ್ಳಿಯಪ್ಪ, ನಾಗರಾಜು, ಸಿದ್ದಯ್ಯನಪುರ ಶಿವರಾಜು, ಕುಮಾರ್, ಇತರೆ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ ರಾಮ್ ಜಯಂತಿ ಅದ್ದೂರಿ ಆಚರಣೆಗೆ ತೀರ್ಮಾನ



