ಬೇಲೂರು: ದೇಶದಲ್ಲಿ ಶಿಕ್ಷಣ ವ್ಯಾಪಾರಿಕರಣವಾಗಿದ್ದು ಆರೋಗ್ಯ ಸೇವೆ ಹಾಗೂ ಶಿಕ್ಷಣವನ್ನು ಉಚಿತವಾಗಿ ನೀಡುವ ಕೆಲಸ ಆಗಬೇಕಿದೆ ಎಂದು ಸಾಲುಮರದ ತಿಮ್ಮಕ್ಕೆ ಅವರ ಪುತ್ರ ಡಾ.ಬಳ್ಳೂರು ಉಮೇಶ್ ಹೇಳಿದರು.
ಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ವೃತ್ತ ಪತ್ರಿಕೆಗಳ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣವಿದ್ದು ಇಂದು ಅನೇಕ ಖಾಸಗಿ ಶಾಲೆಗಳಲ್ಲಿ ಶೂಟುಬೂಟು ಹಾಕಿಕೊಂಡ ಅನರ್ಹ ಶಿಕ್ಷಕರಿಂದಲೇ ಬೋಧನೆ ಮಾಡಿಸುವ ಪರಿಪಾಠ ನಡೆಯುತ್ತಿದೆ.
ಅರ್ಹ ಶಿಕ್ಷಕರಿಂದ ಬೋಧನೆ ದೊರೆಯುತ್ತಿದ್ದರೆ ಅದು ಸರಕಾರಿ ಶಾಲೆಯಿಂದ ಮಾತ್ರ ಎಂದ ಉಮೇಶ್, ಮೌಲ್ಯವಿಲ್ಲದ ಶಿಕ್ಷಣ ಮಕ್ಕಳ ಉಜ್ವಲ ಬದುಕಿಗೆ ತೊಡಕುಂಟಾಗಲಿದೆ. ಮಕ್ಕಳಲ್ಲಿ ಸಂಸ್ಕಾರ, ತಂದೆ, ತಾಯಿ, ಗುರುಗಳಿಗೆ ಗೌರವ ನೀಡುವಂತ ನೀತಿಬೋಧನೆ ಅಗತ್ಯವಿದೆ. ಸರಕಾರಿ ಶಾಲೆಗಳ ಉಳಿಸಿ ಎಂದು ಬೊಟ್ಟು ಮಾಡಿ ತೋರಿಸಿದರೆ ಸಾಲದು ಶಾಲೆಗಳಿಗೆ ಮೂಲಬೂತ ಸೌಲಭ್ಯದ ಕೊರತೆ ನೀಗಿಸಬೇಕಿದೆ.
ವಿದ್ಯಾರ್ಥಿಗಳು ಜ್ಞಾನ ವೃದ್ಧಿಗಾಗಿ ಪತ್ರಿಕೆಗಳನ್ನು ಓದು ಹವ್ಯಾಸ ಬೆಳೆಸಿಕೊಳ್ಳಬೇಕಿದೆ. ಮಕ್ಕಳ ಅತಿಯಾದ ಮೊಬೈಲ್ ಬಳಕೆ ಬಗ್ಗೆ ಪೋಷಕರು ಎಚ್ಚರ ವಹಿಸಬೇಕಿದೆ. ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಪರಿಸರ ಕಾಳಜಿ ಸಾಲಿನಲ್ಲಿ ಇಂದು ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಸಾಲುಮರದ ತಿಮ್ಮಕ್ಕ ಅವರ ಬದುಕು ಕುರಿತು ಹೆಚ್ಚಿನ ಮಾಹಿತಿ ನೀಡಿದರು. ಶಾಲೆಗೆ ಕುಡಿಯುವ ನೀರಿನ ಕೆಲವೊಂದು ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.
ಪುರಸಭೆ ಸದಸ್ಯ ಜಮಾಲುದ್ದೀನ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಓದಿದವರು ಇಂದು ಐಎಎಸ್, ಕೆಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ, ವಿಜ್ಞಾನಿಗಳಾಗಿದ್ದಾರೆ. ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದರೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರಯುತ ಬದುಕು ಸಾಗಿಸಲು ಸಾಧ್ಯವಿದೆ.
ಉತ್ತಮರ ಸ್ನೇಹ, ಉತ್ತಮ ನಡೆ, ನುಡಿ ಬದುಕಿಗೆ ಪೂರಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಶಾಲಾ ಉಪ ಪ್ರಾಂಶುಪಾಲ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷ ಹತ್ತನೆ ತರಗತಿಯಲ್ಲಿ ಶೇ.91.65 ಫಲಿತಾಂಶ ಬಂದಿದ್ದು ಈ ವರ್ಷ ಶೇ.100 ತರುವ ಉದ್ದೇಶವಿದೆ. ಶಾಲೆಯನ್ನು ಬಿ ಶ್ರೇಣಿಗೆ ತರುವ ಪ್ರಯತ್ನದಲ್ಲಿದ್ದೇವೆಂದರು.
ಈ ಸಂದರ್ಭ ಶಿಕ್ಷಕರಾದ ಟಿ.ಡಿ.ತಮ್ಮಣ್ಣಗೌಡ, ಹೇಮಂತಕುಮಾರ್, ಮನೋಹರ್, ಶಾಹಿದ್, ವರ್ತಕ ಇಮ್ತಿಯಾಜ್ ಇದ್ದರು.