ಕೋಲಾರ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಂದರ್ಭದಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸಿ ಸದೃಢ ಆರೋಗ್ಯ ಕಾಪಾಡಿಕೊಳ್ಳುವಂತೆ ಚಾಮರಹಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕವಿತಾ ತಿಳಿಸಿದರು.
ಕೋಲಾರ ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆರೋಗ್ಯ ಇಲಾಖೆ ಏರ್ಪಡಿಸಿದ್ದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಮತ್ತು ಆರೋಗ್ಯ ವಿದ್ಯಾ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತದೆ.
ಇಂತಹ ಶಿಕ್ಷಣ ಪಡೆಯುವಾಗ ವಿದ್ಯಾರ್ಥಿಗಳು ಆರೋಗ್ಯಕ್ಕೆ ಸಂಬಂಧಪಟ್ಟ ಚುಚ್ಚುಮದ್ದು, ಮಾತ್ರೆ ಕಾಲಕಾಲಕ್ಕೆ ಪಡೆಯುವುದು ಶಿಕ್ಷಣ ಇಲಾಖೆಯ ಉಚಿತ ಮೊಟ್ಟೆ, ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಿ ಉನ್ನತ ಉದಾತ್ತ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಈ ನಿಟ್ಟಿಯಲ್ಲಿ ಸದೃಢ ಆರೋಗ್ಯ ಸಮಾಜ ನಿರ್ಮಿಸಲು ಸಹಕಾರಿಗಳಾಗಬೇಕೆಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿ.ಆರ್. ರಶ್ಮಿ ಮಾತನಾಡಿ ವಿದ್ಯಾರ್ಥಿಗಳು ತಮಗೆ ಇರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಲಕಾಲಕ್ಕೆ ಸಂಬಂಧಪಟ್ಟ ಆರೋಗ್ಯ ಕಾರ್ಯಕರ್ತರಿಗೆ, ವೈದ್ಯಧಿಕಾರಿಗಳಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಆಸ್ಪತ್ರೆಗಳನ್ನು ಸಂಪರ್ಕಿಸುವಂತೆ ಈ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದು
ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ವಿ.ಗಂಗಾಧರ್ ಮಾತನಾಡಿ ಆರೋಗ್ಯವಂತ ವ್ಯಕ್ತಿ ಈ ಸಮಾಜದ ಸಂಪನ್ಮೂಲ, ಸಮಾಜದ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾತ್ರವನ್ನು ಹೊಂದಿದ್ದು ಪ್ರತಿ ವಿದ್ಯಾರ್ಥಿಯು ತಮ್ಮ ಆರೋಗ್ಯದ ಹಿತ ಕಾಪಾಡುವುದು ಜವಾಬ್ದಾರಿಯನಿಸಿಕೊಳ್ಳುತ್ತದೆ. ಆರೋಗ್ಯ ಸಮಾಜದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಜಿ. ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳ ಪ್ರಗತಿಗೆ ಆರೋಗ್ಯ ಹೆಚ್ಚು ಪಾತ್ರ ವಹಿಸುತ್ತದೆ. ಪ್ರತಿ ವಿದ್ಯಾರ್ಥಿ ಆರೋಗ್ಯ ಕಾಪಾಡುವಲ್ಲಿ ಪೋಷಕರ ಹೊಣೆ ಇದೆ. ಇದು ನಮ್ಮಗಳ ಜವಾಬ್ದಾರಿಯನ್ನು ಪೋಷಕರು ಅರಿವು ಪಡೆಯಬೇಕು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆರೋಗ್ಯ ಅತಿ ಮುಖ್ಯ ಎಂದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಫಾರ್ಮಸಿಸ್ಟ್ ಔಷಧಿ ವಿತರಕ ತೇಜಸ್ವಿನಿ, ಇಲಾಖೆಯ ಶಾಂತಮ್ಮ, ಶಿಕ್ಷಕರುಗಳಾದ ಪಿಎಂ ಗೋವಿಂದಪ್ಪ, ಎಂ ಆರ್ ಮೀನಾ, ಮತ್ತಿತರು ಉಪಸ್ಥಿತರಿದ್ದರು.