ಹೊಸಕೋಟೆ: ಹೈನುಸಕಾಣಿಕೆದಾರರನ್ನು ಪ್ರೋತ್ಸಾ ಹಿಸಲು ಸರಕಾರ ಹಲವಾರು ವಿಶಿಷ್ಟ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಪ್ರಮುಖವಾಗಿ ರಾಸುಗಳ ಆರೋಗ್ಯ ಕಾಪಾಡಿಕೊಳ್ಳಲು ಕಾಲುಬಾಯಿ ಜ್ವರದ ಲಸಿಕೆ ಹಾಕಿಸಲು ಅಭಿಯಾನ ಕೈಗೊಂಡಿದೆ.
ಇದರ ಸದುಪಯೋಗಪಡಿಸಿಕೊಂಡು ರೈತರು ಕಡ್ಡಾಯ ವಾಗಿ ರಾಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಅನಾಹುತಗಳು ಸಂಭವಿಸುವುದನ್ನು ತಡೆಗಟ್ಟಲು ಸಹಕರಿಸಬೇಕು ಎಂದು ತಾಲೂಕು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಸಹಾಯಕ ನಿರ್ದೇಶಕ ಡಾ: ಸಿ.ಎನ್.ನಾರಾಯಣಸ್ವಾಮಿ ಹೇಳಿದರು.
ಅವರು ತಾಲೂಕಿನ ಲಕ್ಕೊಂಡಹಳ್ಳಿಯಲ್ಲಿ ಪಶುವೈದ್ಯಕೀಯ ಇಲಾಖೆ, ಜಿಕೆವಿಕೆ, ಪಶುವೈದ್ಯಕೀಯ ಮಹಾವಿದ್ಯಾಲಯ, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾಲು ಬಾಯಿ ಲಸಿಕೆ, ಬರಡು ರಾಸುಗಳ ತಪಾಸಣೆ, ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹಳಷ್ಟು ರೈತರು ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದು, ಸಾಕಣೆ ಮಾಡಿರುವ ಹಸು, ಎಮ್ಮೆ, ಎತ್ತುಗಳಿಗೆ ಕಾಲುಬಾಯಿ ಜ್ವರದ ಬಗ್ಗೆ ಮುಂಜಾಗ್ರತೆಯಾಗಿ ಲಸಿಕೆ ಹಾಕಿಸಲು ಗಮನಹರಿಸಬೇಕು. ಇದರಿಂದ ರಾಸುಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಉತ್ತಮ ಬೆಲೆ ಪಡೆಯಲು ಸಹಕಾರಿಯಾಗಲಿದೆ.
ರಾಸುಗಳಿಗೆ ರೋಗ ಕಂಡುಬಂದಲ್ಲಿ ಮಾರಾಟದ ಬೆಲೆ ತೀವ್ರ ಕುಸಿತಗೊಂಡು ರೈತರು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಸರಕಾರ ವೈಜ್ಞಾನಿಕವಾಗಿ ಚಿಂತನೆ ನಡೆಸಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಹಿತ ಕಾಪಾಡುವ ಪ್ರಮುಖ ಉದ್ದೇಶದಿಂದ ಈ ಲಸಿಕಾ ಶಿಬಿರವನ್ನು ಅಭಿಯಾನದಂತೆ ಕೈಗೊಂಡಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ್ ಮಾತನಾಡಿ ಲಸಿಕೆ ಹಾಕಿಸುವುದರಿಂದ ರಾಸುಗಳ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಹಾಲಿನ ಅಧಿಕ ಇಳುವರಿಯನ್ನು ಸಹ ಪಡೆಯಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಸುವ ಬಗ್ಗೆ ಇದ್ದ ಮೂಢನಂಬಿಕೆ ಈಗ ಶೇ. 75ರಷ್ಟು ನಿವಾರಣೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಲಸಿಕೆ ಹಾಕಿಸುವರಿಂದ ರಾಸುಗಳ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಬದಲಾಗಿ ರಾಸುಗಳ ರೋಗ ನಿರೋಧಕ ಶಕ್ತಿ ವೃದ್ಧಿಗೊಳ್ಳುತ್ತದೆ ಎಂದರು.
ಬೆಂಗಳೂರು ಹಾಲು ಒಕ್ಕೂಟದ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ: ಶಿವಾಜಿ ನಾಯಕ್ ಮಾತನಾಡಿ ಜಿಕೆವಿಕೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕೃಷಿ ಮತ್ತು ಹೈನೋದ್ಯಮದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಈ ರೀತಿಯ ಕಾರ್ಯಕ್ರಮ ರೂಪಿಸುತ್ತೇವೆ.
ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪರಸ್ಪರ ಸಹಕಾರ ಪಡೆದುಕೊಂಡು ಕೃಷಿ ಹಾಗೂ ಹೈನೋದ್ಯಮದ ಬಗ್ಗೆ ಅರಿವನ್ನು ಪಡೆದುಕೊಳ್ಳಬೇಕು. ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ರಾಸುಗಳ ಸಾಕಣೆಯಲ್ಲಿ, ಕೃಷಿ ಚಟುವಟಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಲಕ್ಷ್ಮಮ್ಮ, ನಿರ್ದೇಶಕ ರಮೇಶ್, ಜಿಕೆವಿಕೆ ಪ್ರಾಧ್ಯಾಪಕರಾದ ಶಿವಲಿಂಗಯ್ಯ, ಗಣೇಶ್ಮೂರ್ತಿ, ಹಿರಿಯ ವೈದ್ಯಾಧಿಕಾರಿ ಆನಂದ್ ಮಾರೆಗಾರ್, ಡಾ.ಹೆಚ್.ಕೆ. ಪಂಕಜ, ಪ್ರಾಣಿ ಪ್ರಸೂತಿ ತಜ್ಞೆ ಡಾ.ಸುಚಿತ್ರಾ, ಜಿಕೆವಿಕೆ ಹಿರಿಯ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಅನುಷಾ, ಡಾ.ಶುಭಾ, ಬೆಂಗಳೂರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಡಾ.ಪವಿತ್ರಾ, ಡಾ.ಮಂಜುನಾಥ್, ಡಾ.ಅಶೋಕ್, ಗ್ರಾಮದ ಮುಖಂಡರು ಭಾಗವಹಿಸಿದ್ದರು.