ಹೊಸಕೋಟೆ: ವಿಶ್ವ ಪಶು ವೈದ್ಯಕೀಯ ದಿನಾಚರಣೆ ಅಂಗವಾಗಿ ಕರ್ನಾಟಕ ಪಶು ವೈದ್ಯಕೀಯ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ತಾಲೂಕಿನ ಬೆಂಗಳೂರು ಹಾಲು ಒಕ್ಕೂಟದ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ: ಶಿವಾಜಿ ನಾಯಕ್ರವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಪಶುವೈದ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಡಾ: ಶಿವಾಜಿ ನಾಯಕ್ರವರು ಪ್ರತಿವರ್ಷ ನಡೆಯುವ ಕಾಲುಬಾಯಿ ಜ್ವರ ತಡೆಗಟ್ಟಲು ರಾಸುಗಳಿಗೆ ನೀಡುವ ಲಸಿಕೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ ಗುರಿ ಸಾಧಿಸುವಲ್ಲಿ ಶ್ರಮಿಸುತ್ತಿರುವುದು ಹಾಗೂ ರಾಸುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರುವ ಪ್ರಯುಕ್ತ ಈ ಪ್ರಶಸ್ತಿ ನೀಡಲಾಗಿದೆ.
ಗ್ರಾಮಾಂತರ ಜಿಲ್ಲಾಧಿಕಾರಿ ಡಾ: ಶಿವಶಂಕರ್, ಗ್ರಾಮಾಂತರ ಜಿಲ್ಲಾ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ: ಜಗದೀಶ್,
ಹೊಸಕೋಟೆ ತಾಲೂಕು ಸಹಾಯಕ ನಿರ್ದೇಶಕ ಡಾ: ನಾರಾಯಣಸ್ವಾಮಿ, ರೇಬಿಸ್ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಶ್ರೀಕಾಂತ್ ಇಸ್ಲೂರ್, ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಪ್ರಶಸ್ತಿ ವಿಜೇತ ಡಾ: ಶಿವಾಜಿ ನಾಯಕ್ರವರನ್ನು ಶಾಸಕ ಶರತ್ ಬಚ್ಚೇಗೌಡ, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರುಗಳಾದ ಸಿ.ಮಂಜುನಾಥ್, ಎನ್.ಮಂಜುನಾಥ್, ಕೆ.ಎಂ.ಎಂ.ಮಂಜುನಾಥ್ ಅಭಿನಂದಿಸಿ ಒಕ್ಕೂಟದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಲು ಆದ್ಯತೆ ನೀಡುತ್ತಿರುವರಾಗಿದ್ದು, ತಾಲೂಕಿನ ಹಾಲು ಉತ್ಪಾದಕರಿಗೆ ಇಂತಹ ಅಧಿಕಾರಿಗಳು, +ತಜ್ಞ ವೈದ್ಯರ ಸೇವೆ ಹೆಚ್ಚಾಗಿ ಲಭಿಸಲಿ ಎಂದು ಹಾರೈಸಿದ್ದಾರೆ.