ಬೆಂಗಳೂರು: ಸಮಾಜಸೇವೆ ಮತ್ತು ಆರೋಗ್ಯ ಸೇವಾಕ್ಷೇತ್ರದ ದಾರ್ಶನಿಕ ಹರಿಕಾರ ಎಂದೇ ಖ್ಯಾತಿ ಹೊಂದಿರುವ ಡಾ. ಸೀತಾರಾಮ್ ಜಿಂದಾಲ್ ಅವರಿಗೆ ಸೋಮವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರತಿಷ್ಠಿತಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಧಾನಮಂತ್ರಿ ಮತ್ತು ಗೌರವಾನ್ವಿತ ಗಣ್ಯರ ಉಪಸ್ಥಿತಿ ಇದ್ದ ಸಮಾರಂಭದಲ್ಲಿ ಡಾ. ಜಿಂದಾಲ್ ಅವರು ಸಮಾಜಕ್ಕೆ ನೀಡಿರುವ ಅಸಾಧಾರಣ ಕೊಡುಗೆಗಳಿಗೆ ಗೌರವ ಸಂದಿತು.
1932ರ ಸೆಪ್ಟೆಂಬರ್ 12ರಂದು ಹರಿಯಾಣದ ನಲ್ವಾ ಎಂಬ ಗ್ರಾಮದಲ್ಲಿ ಜನಿಸಿದ ಡಾ. ಸೀತಾರಾಮ್ ಜಿಂದಾಲ್ ಅವರ ಬದುಕಿನ ಪ್ರಯಾಣವು ತುಂಬಾ ಸ್ಫೂರ್ತಿದಾಯಕವಾಗಿದೆ. ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ (ಜೆಎಎಲ್)ನ ಸ್ಥಾಪಕ ಅಧ್ಯಕ್ಷರಾಗಿರುವ ಅವರ ಉದ್ಯಮಶೀಲತೆಯ ಚಾಣಾಕ್ಷತೆಯು ಅವರ ಕಂಪನಿ ಭಾರತದ ಅತಿದೊಡ್ಡ ಅಲ್ಯೂಮಿನಿಯಂ ಹೊರತೆಗೆಯುವ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಅವರು ವ್ಯವಹಾರಗಳನ್ನು ಮೀರಿದ ದೂರದೃಷ್ಟಿ ಹೊಂದಿದ್ದಾರೆ.
ಅವರು ಎಸ್. ಜಿಂದಾಲ್ ಚಾರಿಟೇಬಲ್ ಫೌಂಡೇಶನ್, ಹಲವಾರು ಟ್ರಸ್ಟ್ಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪನೆ ಮಾಡಿ ಜನಸೇವೆ ಮಾಡಿದ್ದಾರೆ, ಇವೆಲ್ಲವೂ ಅವರ ಜನಸೇವೆಯ ಕೆಲಸಗಳಿಗೆ ಸಾಕ್ಷಿಯಾಗಿ ನಿಂತಿವೆ.ಡಾ. ಜಿಂದಾಲ್ ಅವರು ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಶ್ರೀ ಚಂದ್ರಶೇಖರ್, ಶ್ರೀ ಐ.ಕೆ. ಗುಜ್ರಾಲ್, ಶ್ರೀ ದೇವ್ ಲಾಲ್ಜಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀರಾಮಕೃಷ್ಣ ಹೆಗಡೆ ಮತ್ತು ಅನೇಕ ಗಣ್ಯರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ಈ ಎಲ್ಲಾ ಗಣ್ಯರು ಡಾ. ಜಿಂದಾಲ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಜೆಎನ್ಐ ಸಂಸ್ಥೆಯಲ್ಲಿ ರೋಗಿಗಳಾಗಿ ಬಂದು ವೈಯಕ್ತಿಕ ಅನುಭವ ಪಡೆದು ಜಿಂದಾಲ್ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.ಡಾ. ಜಿಂದಾಲ್ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಅವರ ಜೀವಮಾನದ ಸಾಧನೆಗಳಿಗೆ ಸಿಕ್ಕ ಸೂಕ್ತವಾದ ಗೌರವವಾಗಿದೆ.