This is the title of the web page
This is the title of the web page

ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ: ವಿಜಯಾ ದಬ್ಬೆ ಜಾತಿ, ಧರ್ಮ ಮೀರಿದವರು

ಮೈಸೂರು: ಜಾತಿ, ಧರ್ಮ, ಮತ, ಲಿಂಗ ಎಲ್ಲವನೂ ಮೀರಿದ ಮಾನವೀಯ ವ್ಯಕ್ತಿತ್ವ ವಿಜಯಾ ದಬ್ಬೆ ಅವರಲ್ಲಿತ್ತು ಎಂದು ಹಿರಿಯ ಸಂಶೋಧಕಿ ಮತ್ತು ಲೇಖಕರಾದ ಡಾ.ಟಿ.ಎನ್.ನಾಗರತ್ನ ಹೇಳಿದರುಮೈಸೂರಿನ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಡಾ.ವಿಜಯಾ ದಬ್ಬೆ ಅವರ ಸ್ಮರಣಾರ್ಥ ನಡೆಸಿದ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕಾವ್ಯ ಮತ್ತು ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳ ಹಕ್ಕು ಮತ್ತು ಕರ್ತವ್ಯ ಎರಡರ ಬಗ್ಗೆಯೂ ಎಚ್ಚರ ಹೊಂದಿದ್ದ ವಿಜಯಾ ಅವರು ಮನೆಯಲ್ಲಿ ಹಿರಿಯ ಮಗ ಯಾವ ರೀತಿ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುತ್ತಾನೋ, ಹಾಗೆ ತನ್ನ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರು ತಮ್ಮ ಬದುಕಿನುದ್ದಕ್ಕೂ ನಡೆ ಮತ್ತು ನುಡಿಯನ್ನು ಒಂದಾಗಿಸಿಕೊಂಡು ಬದುಕಿದರು. ಮಾತು ಕಡಿಮೆ. ಆದರೆ, ಎಲ್ಲವನ್ನೂ ನಡವಳಿಕೆಯಿಂದಲೇ ಹೇಳುವಂತೆ ಇರುತ್ತಿದ್ದರು. ಅವರು ಹಿತ, ಮಿತ, ಮೃದು ಭಾಷಿಯಾಗಿದ್ದರು.

ಅನಗತ್ಯವಾಗಿ ಮಾತನಾಡುತ್ತಿರಲಿಲ್ಲ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವರು ಅಳೆದು ತೂಗಿ ಮಾತನಾಡುತ್ತಿದ್ದರು. ಅವರ ವಿಚಾರಗಳು ತೀಕ್ಷ್ಮವಾಗಿರುತ್ತಿದ್ದವು. ಸದಾ ಸಮಾಜದ ಶೋಷಿತ ಮಹಿಳೆಯರ ಪರ ನಿಂತು ಕೆಲಸ ಮಾಡುತ್ತಿದ್ದರು ಎಂದರು.
ಅವರು ಸಮತಾ ಅಧ್ಯಯನ ಕೇಂದ್ರವನ್ನು ಆರಂಭಿಸಲು ಅಂದಿನ ಎಲ್ಲ ಮಹಿಳಾ ಸಂಶೋಧನಾ ವಿದ್ಯಾರ್ಥಿ ಗಳ ಜೊತೆಗೆ ಚರ್ಚಿಸಿದ್ದರು. ನಾಲ್ಕು ಜನರ ಮುಂದೆ ಮಾತನಾಡಲು ನಡುಗುತ್ತಿದ್ದ ಹೆಣ್ಣು ಮಕ್ಕಳಿಗೆ ವಿವಿಧ ವಿಷಯಗಳನ್ನು ನೀಡಿ, ಅವುಗಳ ಕುರಿತು ಚರ್ಚೆ, ಪ್ರಬಂಧಗಳನ್ನು ಮಂಡಿಸಲು ಹೇಳುತ್ತಿದ್ದರು. ಇದು ಅಂದಿನ ಹೆಣ್ಣು ಮಕ್ಕಳಲ್ಲಿ ಇದ್ದ ಹಿಂಜರಿಕೆಯನ್ನು ದೂರ ಮಾಡಿತು.

ಹುಡುಗಿಯರು ಕವಿತೆಗಳನ್ನು, ಪ್ರಬಂಧಗಳನ್ನು ಬರೆಯಲು ಆರಂಭಿಸಿದರು. ಆ ನಂತರ ಬೇರೆ ಬೇರೆ ವೃತ್ತಿ ಮಾಡುತ್ತಾ, ಇಂದು ಹೆಸರು ಮಾಡಿದ್ದಾರೆ. ಇದಕ್ಕೆಲ್ಲ ವಿಜಯಾ ದಬ್ಬೆ ಅವರೇ ಪ್ರೇರಣೆ ಎಂದು ಸ್ಮರಿಸಿದರು. ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಸಂಶೋಧಕಿ, ಲೇಖಕಿ ಬಿ.ಎಂ.ರೋಹಿಣಿ ಮಾತನಾಡಿ, ವಿಜಯಾ ದಬ್ಬೆ ಅವರು ಮೈಸೂರು ವಿವಿಯಲ್ಲಿ ನನಗೆ ಗುರುವಾಗಿದ್ದರು. ಅವರು ಪಾಠ ಮಾಡುವ ಶೈಲಿ, ನಡೆ, ನುಡಿ, ಸರಳತೆ ಎಲ್ಲವನ್ನು ಕಂಡು ನಾವು ಮಾರುಹೋಗಿದ್ದೆವು.

ಅವರು ನಮ್ಮ ಮೇಲೆ ಪ್ರಭಾವ ಬೀರುವ ಜೊತೆಗೆ ನಮಗೆ ರೋಲ್ ಮಾಡೆಲ್ ಆಗಿದ್ದರು. ಅವರ ಮೇಲೆ ನಮಗೆ ಆಗಲೇ ಆರಾಧನಾ ಭಾವವಿತ್ತು ಎಂದರು. ಜೊತೆಗೆ ಸ್ತ್ರೀವಾದ ಹೆಚ್ಚು ಪ್ರಚಲಿತವಾಗುತ್ತಿದ್ದ ವೇಳೆ ಸ್ತ್ರೀವಾದದ ಬಗ್ಗೆ ಪುರುಷರು ಕೊಂಕು ನುಡಿಗಳನ್ನಾಡುತ್ತಿದ್ದುದುಂಟು. ಅಲ್ಲದೇ, ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಮಾತುಗಳನ್ನು ಹೇಳುವ ಮೂಲಕ ವಾದವನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದರು. ಇಂತಹ ಸಮಯದಲ್ಲಿ ಹೆಣ್ಣಿಗೆ ಹೆಣ್ಣು ಶತ್ರುವಲ್ಲ ಎಂಬುದನ್ನು ಬಹಳ ಸೂಕ್ಷ್ಮವಾಗಿ ವಿಜಯಾ ದಬ್ಬೆ ವಿವರಿಸಿದ್ದರು ಎಂದು ತಿಳಿಸಿದರು.

“ಪ್ರಶಸ್ತಿ, ಬಹುಮಾನ ವಿತರಣೆ: ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಕೊಡಮಾಡುವ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಸಂಶೋಧಕಿ, ಲೇಖಕಿ ಬಿ.ಎಂ.ರೋಹಿಣಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಕವನ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದ ಬೆಂಗಳೂರು ವಿಜಯಾ ಟೀಚರ್ಸ್ ಕಾಲೇಜು ವಿದ್ಯಾರ್ಥಿ ಎಂ.ಸಿ.ಜಗದೀಶ್ (ಪ್ರ), ಕೇರಳ ಕೇಂದ್ರೀಯ ವಿವಿ ಕಾಸರಗೋಡು ವಿದ್ಯಾರ್ಥಿನಿ ಕೆ.ಸ್ವಾತಿ (ದ್ವಿ), ಸಾಗರ ತಾಲ್ಲೂಕು ಹೊಸಕೊಪ್ಪದ ವಿದ್ಯಾರ್ಥಿ ಎಚ್.ಜಿ.ಅಭಿನಂದನ್ (ತೃ) ಹಾಗೂ ಕಥಾ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದ ಉಜಿರೆ ಎಸ್‍ಡಿಎಂ ಕಾಲೇಜು ವಿದ್ಯಾರ್ಥಿ ಬಿ.ಎಂ.ಸಂಜಯ್ (ಪ್ರ), ಸಕಲೇಶಪುರ ಜೆಎಸ್ ಎಸ ಮಹಾವಿದ್ಯಾಲಯದ ವಿದ್ಯಾರ್ಥಿ ಶಿವಶಂಕರ ಕಡದಿನ್ನಿ (ದ್ವಿ), ಕೇರಳ ಕೇಂದ್ರೀಯ ವಿವಿ ಕಾಸರಗೋಡು ವಿದ್ಯಾರ್ಥಿನಿ ಆರ್. ನವ್ಯಾ (ತೃ) ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕವನ ವಿಭಾಗದಲ್ಲಿ 10, ಕಥಾ ವಿಭಾಗದಲ್ಲಿ 6 ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು”.