ಕೋಲಾರ: ಕೋಲಾರ ಜಿಲ್ಲೆ ಸೇರಿರುವ ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ತುಮಕೂರಿನಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹಿರಿಯ ಮುಖಂಡ ಗೋವಿಂದಕಾರಜೋಳ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಡಾ.ವೈ.ಎ.ನಾರಾಯಣಸ್ವಾಮಿ, ಸತತವಾಗಿ ಶಿಕ್ಷಕರ ಸಮಸ್ಯೆಗಳಿಗೆ ಸದನದ ಹೊರಗೂ,ಒಳಗೂ ನಿರಂತರ ಹೋರಾಟ ಮಾಡಿದ್ದೇನೆ, ಅನೇಕ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸಿರುವುದರಿಂದ ಕ್ಷೇತ್ರದ ಗುರುವೃಂದ ನನ್ನೊಂದಿಗೆ ಇದ್ದು, ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ಡಿಸೆಂಬರ್ ಒಳಗೆ 7ನೇ ವೇತನ ಆಯೋಗ, ಓಪಿಎಸ್ ಜಾರಿ ಮಾಡುವ ಭರವಸೆ ಈಡೇರಿಸುವುದಾಗಿ ತಿಳಿಸಿ ಇದೀಗ ವಿಫಲವಾಗಿದೆ, ಜತೆಗೆ ಒಪಿಎಸ್ ಜಾರಿಯ ತನ್ನ ಪ್ರಣಾಳಿಕೆಯಿಂದಲೂ ಹಿಂದೆ ಸರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರ್ಕಾರ ಶಿಕ್ಷಕರು ಮತ್ತು ನೌಕರರಿಗೆ ನೀಡಿರುವ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎನ್ಪಿಎಸ್ ರದ್ದು-ಒಪಿಎಸ್ ಜಾರಿ ಮಾಡುವ ಭರವಸೆ ನೀಡಿತ್ತು. ವಿಧಾನಸಭೆ ಮಾತ್ರವಲ್ಲ ಲೋಕಸಭಾ ಚುನಾವಣೆ ಮುಗಿದರೂ ಕಾರ್ಯಗತಗೊಳಿಸಲು ಮುಂದಾಗಿಲ್ಲ ಎಂದು ಟೀಕಿಸಿದರು.
ಎನ್ಪಿಎಸ್ ಅಡಿ ಈಗಾಗಲೇ ನಿವೃತ್ತರಾಗಿರುವ ಕೆಲವು ಶಿಕ್ಷಕರ ಬದುಕು ನರಕವಾಗಿದೆ, ಅವರ ಮುಸ್ಸಂಜೆಯ ಜೀವನದಲ್ಲಿ ತಿಂಗಳಿಗೆ ಕನಿಷ್ಟ 2-3 ಸಾವಿರವೂ ಕೈಗೆ ಬರುತ್ತಿಲ್ಲ ಎಂದ ಅವರು, ಇಂತಹ ನೌಕರರ ನೆರವಿಗೆ ಸರ್ಕಾರ ಬರಬೇಕು, ಓಪಿಎಸ್ ಜಾರಿ ಮಾಡಬೇಕು ಎಂದರು.ಪ್ರತಿ ವರ್ಷ ಮಾರ್ಚ್ನಿಂದ ಮೇ ತಿಂಗಳ ನಡುವೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಸಹಶಿಕ್ಷಕರಿಂದ ಮುಖ್ಯಶಿಕ್ಷಕರಾಗಿ ಬಡ್ತಿ, ಸಹಶಿಕ್ಷಕರಿಂದ ಉಪನ್ಯಾಸಕರಾಗಿ ಬಡ್ತಿ ಪ್ರಕ್ರಿಯೆಗಳನ್ನು ಮುಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಅನುದಾನಿತ ಶಾಲೆಗಳಲ್ಲಿ 2015 ರಿಂದೀಚೆಗೆ ಹುದ್ದೆಗಳ ಭರ್ತಿಗೆ ಅವಕಾಶ ನೀಡಬೇಕು, ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಮೇಲಾಗುತ್ತಿರುವ ದುಷ್ಪರಿಣಾಮ ತಡೆಯಬೇಕು ಎಂದು ಆಗ್ರಹಿಸಿದರು.ಖಾಸಗಿ ಶಾಲೆಗಳ ಶಿಕ್ಷಕರು ಕಡಿಮೆ ಸಂಬಳದೊಂದಿಗೆ ಅತ್ಯಂತ ಕಷ್ಟದ ಜೀವನ ನಡೆಸುತ್ತಿದ್ದು, ಈ ಶಿಕ್ಷಕರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು ಆಗ್ರಹಿಸಿದ ಅವರು, ಸರ್ಕಾರಿ ನೌಕರರು,ಶಿಕ್ಷಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಒತ್ತಾಯಿಸಿದರು.
ಕಳೆದ 18 ವರ್ಷಗಳಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಸದನದ ಹೊರಗೆ,ಒಳಗೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ, ಜಾತಿ,ಮತ ಎಣಿಸದೇ ಶಿಕ್ಷಕ ಸ್ನೇಹಿಯಾಗಿದ್ದೇನೆ, ಯಾವುದೇ ಸಣ್ಣ ತಪ್ಪು ಎಸಗಿಲ್ಲ, ಕಪ್ಪು ಚುಕ್ಕೆ ಇಲ್ಲದಂತೆ ನಿಮ್ಮ ಪ್ರತಿನಿಧಿಯಾಗಿ ಗೌರವ ಉಳಿಸಿಕೊಂಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಇಂಚರ ಗೋವಿಂದರಾಜು ಸೇರಿದಂತೆ ಆಗ್ಯೇಯ ಪದವೀಧರ ಕ್ಷೇತ್ರ ವ್ಯಾಪ್ತಿಯ ಬಿಜೆಪಿ,ಜೆಡಿಎಸ್ನ ಶಾಸಕರು, ಹಲವಾರು ಮುಖಂಡರು ಹಾಜರಿದ್ದರು.