ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ದ್ರಾವಿಡ್ ಮುಂದುವರಿಯಲಿದ್ದಾರೆ.ದ್ರಾವಿಡ್ ತರಬೇತಿಯ ಭಾರತ ತಂಡ ಇತ್ತೀಚೆಗೆ ಏಕದಿನ ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು.ಅಹಮದಾಬಾದಿನಲ್ಲಿ ನ. 19ರಂದು ಫೈನಲ್ನಲ್ಲಿ ಆಸ್ಟ್ರೇಲಿಯಾಕ್ಕೆ ಸೋಲುವ ಮೊದಲು ಸತತವಾಗಿ 10 ಪಂದ್ಯಗಳನ್ನು ಗೆದ್ದು ಅಜೇಯ ಸಾಧನೆ ಪ್ರದರ್ಶಿಸಿತ್ತು.
ದ್ರಾವಿಡ್ ಅವರೊಂದಿಗೆ ನೆರವು ಸಿಬ್ಬಂದಿ ಗುತ್ತಿಗೆಯನ್ನೂ ವಿಸ್ತರಿಸಲಾಗಿದೆ.ರವಿ ಶಾಸ್ತ್ರಿ ಅವರ ಉತ್ತರಾಧಿಕಾರಿಯಾಗಿ 2021ರ ನವೆಂಬರ್ನಲ್ಲಿ (ಟಿ20 ವಿಶ್ವಕಪ್ ನಂತರ) ದ್ರಾವಿಡ್ ಎರಡು ವರ್ಷಗಳ ಅವಧಿಗೆ ಕೋಚ್ ಆಗಿ ನೇಮಕಗೊಂಡಿದ್ದರು. ವಿಶ್ವಕಪ್ವರೆಗೆ ಅವರ ಗುತ್ತಿಗೆ ಅವಧಿಯಿತ್ತು. ದ್ರಾವಿಡ್ ಅವಧಿಯಲ್ಲಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲೂ ರನ್ನರ್ ಅಪ್ ಆಗಿತ್ತು. ಅಲ್ಲೂ ಆಸ್ಟ್ರೇಲಿಯಾ ಜಯಶಾಲಿಯಾಗಿತ್ತು.
‘ಐಸಿಸಿ ಟ್ರೋಫಿ ಗೆಲ್ಲಿಸಿಕೊಡಬೇಕೆಂಬ ದ್ರಾವಿಡ್ ಬೆನ್ನಿಗೆ ಬಿಸಿಸಿಐ ನಿಲ್ಲಲಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಥಿರವಾದ ಪ್ರದರ್ಶನ ನೀಡಲು ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ಅವರಿಗೆ ನೀಡಲಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತ ಸುಮಾರು 12 ವರ್ಷಗಳಿಂದ ಐಸಿಸಿಯ ಯಾವುದೇ ಪ್ರಮುಖ ಟ್ರೋಫಿ ಗೆದ್ದುಕೊಂಡಿಲ್ಲ.
ಟೀಮ್ ಇಂಡಿಯಾ ಜೊತೆಗಿನ ಕಳೆದ ಎರಡು ವರ್ಷಗಳು ಸ್ಮರಣೀಯವಾಗಿದೆ. ಜೊತೆಯಾಗಿ ನಾವು ಏಳುಬೀಳುಗಳನ್ನು ಕಂಡೆವು. ಈ ಯಾನದಲ್ಲಿ ತಂಡದೊಳಗೆ ಸಿಕ್ಕ ಬೆಂಬಲ ಮತ್ತು ಅನ್ಯೋನ್ಯತೆ ಅದ್ಭುತ’ ಎಂದು ಅವರು ಹೇಳಿದರು.