ವಿಜಯನಗರ: ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ವಿರೂಪಾಕ್ಷನ ದರ್ಶನ ಪಡೆಯಲು ಸಾಂಪ್ರದಾಯಿಕ ಉಡುಗೆ ಕಡ್ಡಾಯ. ಬರ್ಮುಡ, ಜೀನ್ಸ್ ಚಡ್ಡಿ ಧರಿಸಿ ಬಂದರೆ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ.
ಪಂಚೆ ತೊಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ದೇವಸ್ಥಾನದ ಆವರಣದ ಒಳಗೆ ತುಂಡುಡಿಗೆ ನಿಷೇಧಿಸಲಾಗಿದೆ.
ಪುರಾತನ ಪ್ರವಾಸಿ ತಾಣವೂ ಆದ ಹಂಪಿಗೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಅದರಲ್ಲೂ ವಿದೇಶಿಕರು ಸಹ ದರ್ಶನಕ್ಕೆ ಬರುತ್ತಾರೆ. ಅವರು ಹೆಚ್ಚಾಗಿ ತುಂಡು ಉಡುಗೆಯಲ್ಲಿ ಬರುತ್ತಿದ್ದು, ಇದರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ದೂರು ಕೇಳಿಬಂದಿತ್ತು. ಹೀಗಾಗಿ ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ.
ಮಹಿಳೆಯರು ಸಹ ತುಂಡುಡುಗೆಯಲ್ಲಿ ಬಂದರೆ ಮೇಲೆ ಶಲ್ಯ ತೊಡಬೇಕಾಗಿದೆ. ಕೊಡುವ ವಸ್ತ್ರಕ್ಕೆ ಸದ್ಯ ಶುಲ್ಕ ಪಡೆಯುತ್ತಿಲ್ಲ. ದೇವರ ದರ್ಶನ ಮಾಡಿದ ಬಳಿಕ ವಸ್ತ್ರವನ್ನು ವಾಪಸ್ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಪಂಚೆ, ದೋತಿ, ಸೀರೆ ಇಂತಹ ಸಾಂಪ್ರದಾಯಿಕ ಉಡುಗೆಗೆ ಅವಕಾಶ ಇದೆ. ಪ್ರವಾಸಕ್ಕೆ ಬರುವವರು ದೇವಸ್ಥಾನಕ್ಕೆ ಭೇಟಿ ನೀಡುವಾಗ, ಭಕ್ತಿ ಭಾವನೆ ಉದ್ದೀಪನೆಯ ಉಡುಪು ಧರಿಸಿ ದೇವರ ದರ್ಶನ ಪಡೆಯಬೇಕು. ಈ ಸದುದ್ದೇಶದಿಂದ ವಿಶೇಷ ಕ್ರಮ ವಹಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು. ಹಾಗೂ ಭಕ್ತರು ಸಹಕರಿಸುವಂತೆ ಮನವಿ ಮಾಡಿದರು.