ನಾವು ಧರಿಸುವ ಉಡುಪು ನಮಗೆ ಮೊದಲು ಸಂತೋಷ ಕೊಡಬೇಕು. ನೋಡುವವರಿಗೂ ಅಸಹ್ಯ ಆಗುವ ರೀತಿ ಇರಬಾರದು. ಯಾವ ಉಡುಪೇ ಆಗಲಿ ಮೊದಲು ನಮ್ಮ ದೇಹಕ್ಕೆ ಒಪ್ಪುವ ರೀತಿ ಇರಬೇಕು.ಬೆಳಿಗ್ಗೆ ಎದ್ದ ಕೂಡಲೇ ದೈನಂದಿನ ಕೆಲಸ ಮುಗಿಸಿ ಸ್ನಾನ ಮಾಡಿಕೊಂಡು ಫ್ರೆಶ್ ಬಟ್ಟೆ ಧರಿಸಿದರೆ ಮನಸಿಗೆ ಬಹಳ ಖುಷಿಯಾಗುತ್ತದೆ.
ಹೊರಗಡೆ ಎಲ್ಲೂ ಹೋಗದಿದ್ದರೂ ಹೊರಗೆ ಹೋಗುವಂತೆ ಬಟ್ಟೆಗಳನ್ನು ಧರಿಸಿದಾಗ ನಿಜವಾಗಿಯೂ ಮನಸಿಗೆ ಉಲ್ಲಾಸ ಕೊಡುತ್ತದೆ. ದಿನದಲ್ಲಿ ರಾತ್ರಿ ಹಾಕುವ ಉಡುಪನ್ನು(ನೈಟಿ ಅಥವಾ ನೈಟ್ ಡ್ರೆಸ್) ಧರಿಸಿದ್ದರೆ ಮನಸಿಗೆ ಹಿತವಿರುವುದಿಲ್ಲ. ಒಂದು ರೀತಿಯ ಜಡತ್ವ ಇರುತ್ತದೆ, ಲವಲವಿಕೆಯಿಂದ ಇರಲು ಸಾಧ್ಯವಿಲ್ಲ. ಇದ್ದಕ್ಕಿದ್ದಂತೆ ಮನೆಗೆ ಯಾರಾದರೂ ಬಂದರೆ ಅಂಥಹ ಉಡುಪುಗಳಿಂದ ಮುಜುಗರವಾಗುತ್ತದೆ.
ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ ವಯಸ್ಸಿಗೆ ತಕ್ಕಂತೆ ಉಡುಪು ಧರಿಸಿದರೆ ಅದಕ್ಕೆ ಅರ್ಥವೂ ಇರುತ್ತದೆ ಬೆಲೆಯೂ ಇರುತ್ತದೆ. ದೇಹದ ಆಕಾರದ ಮೇಲೂ ಉಡುಪು ಬಹಳ ಮಹತ್ವಪೂರ್ಣವಾಗಿರುತ್ತದೆ. ಅತೀ ದಪ್ಪ ಇರುವವರು ಅತೀ ಬಿಗಿಯಾದ ಉಡುಪು ಧರಿಸಿದಾಗ ದೇಹದ ಅಂಗಾಂಗಳೆಲ್ಲ ಎದ್ದು ಕಾಣುವ ರೀತಿ ನೋಡುಗರನ್ನು ಮುಜುಗರ ಪಡಿಸುತ್ತದೆ. ಅಂತಹ ಜನರ ಮೇಲೂ ಒಳ್ಳೆಯ ಭಾವ ಮೂಡುವುದಿಲ್ಲ.
ಊಟ ತನ್ನಿಚ್ಛೆ ನೋಟ ಪರರ ಇಚ್ಛೆ ಅನ್ನುವ ಹಾಗೆ ನಮಗೆ ಹೇಗೆ ಬೇಕಾದರೂ ಊಟ ಮಾಡಬಹುದು ಆದರೆ ಬಟ್ಟೆ ಧರಿಸುವಾಗ ಅದು ನಮ್ಮ ಇಷ್ಟವೇ ಆಗಿದ್ದರೂ ನೋಟ ಬೇರೆಯವರದು. ಒಳ್ಳೆಯ ಭಾವ, ಗೌರವ ಪಡೆಯಲು ಉಡುಪು ಸಹ ಮುಖ್ಯ ಪಾತ್ರ ವಹಿಸಿದೆ.
ರಾತ್ರಿ ಮಲಗುವಾಗ ಸಡಿಲವಾದ ಬಟ್ಟೆಗಳನ್ನು ಧರಿಸಬೇಕು.
ರಕ್ತಸಂಚಾರಕ್ಕೆ ಅಡಚಣೆಯಾಗಬಾರದು ಹಾಗಾಗಿ ನೈಟಿ ಅಥವಾ ರಾತ್ರಿ ಧರಿಸುವ ಉಡುಪುಗಳು ವಿಶೇಷವಾಗಿ ಅಳಕವಾಗಿ (ದೊಗಲೆ) ಇರುತ್ತದೆ. ಮಕ್ಕಳಿಗೂ ಸಹ ಅವುಗಳ ಮನಸಿಗೆ ಹಿತವಾಗುವಂತೆ ಬಟ್ಟೆ ಹಾಕಬೇಕು.ಎಲ್ಲಾ ಋತುಮಾನಗಳಿಗೂ ಕಾಟನ್ ಉಡುಪುಗಳು ಹಿತವಾಗಿರುತ್ತದೆ. ದೇಹದ ಬೆವರನ್ನು ಹೀರಿಕೊಂಡು ದುರ್ಗಂಧ ಬೀರುವುದು ತಪ್ಪಿಸುತ್ತದೆ.
ಇತರ ಸಿಂಥೆಟಿಕ್ ಉಡುಪುಗಳು (ನೈಲಾನ್, ಪಾಲಿಯೆಸ್ಟರ್,ಇತರ ಉಡುಪುಗಳು) ಗಾಳಿ ಆಡಲು ಅವಕಾಶವಿಲ್ಲದೆ ದೇಹ ದುರ್ಗಂಧ ಬೀರುತ್ತದೆ. ಬೇಸಿಗೆಕಾಲದಲ್ಲಿ ಹೆಚ್ಚಾಗಿ ಸಿಂಥೆಟಿಕ್ ಉಡುಪುಗಳನ್ನು ಧರಿಸಬಾರದು. ಕೆಲವೊಮ್ಮೆ ಬೆವರಿನಿಂದ ದೇಹ ಕೆರೆತೆ ಶುರುವಾಗುತ್ತದೆ. ಈ ಸಮಸ್ಯೆ ಇದ್ದಾಗ ಜನರ ಮಧ್ಯದಲ್ಲಿ ಇದ್ದಾಗ ಬಹಳ ಹಿಂಸೆ ಹಾಗು ಸಂಕೋಚವಾಗುತ್ತದೆ ಹಾಗಾಗಿ ನಾವು ಧರಿಸುವ ಬಟ್ಟೆಗಳು ಮೊದಲು ನಮಗೆ ಹಿತವಾಗಿರಬೇಕು.
ಪ್ರಪಂಚದ ಎಲ್ಲಾ ಭಾಗಗಳಲ್ಲೂ ಅವರದೇ ಪ್ರಾಂತ್ಯದ ವಿಶೇಷ ಉಡುಪುಗಳಿರುತ್ತದೆ. ಆ ಪ್ರಾಂತ್ಯದಹವಾಮಾನಕ್ಕೆ ಅನುಸಾರವಾಗಿ ಬಟ್ಟೆ ಧರಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ವಿಶೇಷವಾದ ಬಟ್ಟೆ ಧರಿಸುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತ ಪಡಿಸುತ್ತಾರೆ. ಉಡುಗಿರೆಯಾಗಿಯೂ ಉಡುಪುಗಳನ್ನು ಅವರ ವಯಸ್ಸಿನ ತಕ್ಕ ಹಾಗೆ ಕೊಡುತ್ತಾರೆ.
ಉಡುಪು ದೇಹದ ಅಂದ ಹೆಚ್ಚಿಸುತ್ತದೆ. ಘನತೆ ಹೆಚ್ಚಿಸುತ್ತದೆ. ನಾವು ತಿಂದ ಆಹಾರ ಕಾಣುವುದಿಲ್ಲ. ಭಕ್ಷ್ಯ ಭೋಜನ ತಿಂದಿದ್ದರೂ ಯಾರಿಗೂ ಕಾಣುವುದಿಲ್ಲ ಆದರೆ ನಾವು ಧರಿಸುವ ಉಡುಪು ನಮಗೆ ಮರ್ಯಾದೆ ಹಾಗು ಘನತೆ ಹೆಚ್ಚಿಸುವಂತೆ ಇರಬೇಕು.