ಬೆಂಗಳೂರು: ಕಾರು ಚಾಲಕನೊಬ್ಬ ಮನ ಬಂದಂತೆ ಕಾರು ಚಲಾಯಿಸಿ ಕಂಡ ಕಂಡವರಿಗೆ ಡಿಕ್ಕಿ ಹೊಡೆದಿದ್ದಾನೆ. ಹುಚ್ಚಾಪಟ್ಟೆ ಕಾರು ಚಲಾಯಿಸಿ ಪಾದಚಾರಿಗಳಿಗೆ ಹಾಗೂ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೇ 21ರ ಬೆಳಿಗ್ಗೆ 8:30ರ ಸುಮಾರಿಗೆ ವೆಸ್ಟ್ ಆಫ್ ಕಾರ್ಡ್ ರೋಡ್ನ ಎನ್ಪಿಎಸ್ ಜಂಕ್ಷನ್ ಬಳಿ ಕೆಎ02ಎಂಕೆ 4206 ಸಂಖ್ಯೆಯ ಮಾರುತಿ ಕಾರಿನಲ್ಲಿ ಬಂದ ಚಾಲಕನಿಂದ ಕೃತ್ಯ ನಡೆದಿದೆ. ಘಟನೆಯಲ್ಲಿ ಪಾದಚಾರಿ ವೆಂಕಟೇಶ್ ಎಂಬವರ ಕೈಕಾಲುಗಳಿಗೆ ಗಾಯವಾಗಿದೆ. ಇದೇ ವೇಳೆ ಬೇರೆ ವಾಹನಗಳಿಗೂ ಡಿಕ್ಕಿ ಹೊಡೆಸಿದ್ದಾನೆ.
ಘಟನೆ ಸಂಬಂಧ ವಿಜಯನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳು ವೆಂಕಟೇಶ್ ಮಗನ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.ವಾಹನದ ಜೊತೆ ಚಾಲಕನನ್ನು ವಶಕ್ಕೆ ಪಡೆದು ವಿಜಯನಗರ ಸಂಚಾರಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.