ಗುಂಡ್ಲುಪೇಟೆ: ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ತಪಾಸನೆ ಮಾಡುವ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 5ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಮದ್ದೂರು ಮತ್ತು ಕೆಕ್ಕನಹಳ್ಳ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಕೇರಳ ಹಾಗೂ ತಮಿಳುನಾಡು ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿದ್ದ ಎರಡು ರಾಜ್ಯಗಳಿಂದ ಬರುವ ಸರಕು ಸಾಗಣೆ ಮಾಡುವ ವಾಹನ ಸೇರಿದಂತೆ ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಈ ಮಧ್ಯೆ ಶುಕ್ರವಾರ ಬೆಳಗ್ಗೆ ಗುಂಡ್ಲುಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ತಪಾಸಣೆಗೆ ಮಾಡಿದ ಸಿಬ್ಬಂದಿಗಳು ಇಳಿದ ತಮಿಳುನಾಡು ಮತ್ತು ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ಎರಡು ಕಾರು, ಪಿಕಪ್ ಮತ್ತು ಬೊಲೆರೊ ವಾಹನದಲ್ಲಿ ದಾಖಲೆ ಇಲ್ಲದೆ ಸಾಗಿಸುತಿದ್ದ ಒಟ್ಟು 5 ಲಕ್ಷ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ತಮಿಳುನಾಡಿನ ಕೆಕ್ಕನಹಳ್ಳ ಚೆಕ್ ಪೋಸ್ಟ್ ಮಾರ್ಗವಾಗಿ ರಾಜ್ಯ ಪ್ರವೇಶಿಸುವ ಎಲ್ಲಾ ವಾಹನಗಳನ್ನು ಪೊಲೀಸರು ಹಾಗು ಕಂದಾಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದು, ಹೊರ ರಾಜ್ಯದಿಂದ ಬರುವ ವಾಹನ ವಿವರಗಳನ್ನು ಪೊಲೀಸರು ಪಡೆದುಕೊಳ್ಳುತಿದ್ದಾರೆ. ತಪಾಸಣೆ ವೇಳೆ ಗುಂಡ್ಲುಪೇಟೆ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ ಸೇರಿದಂತೆ ಪೊಲೀಸ್ ಪೇದೆಗಳು ಹಾಗು ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.