ನವದೆಹಲಿ: ಆನ್ಲೈನ್ ಟ್ರಾವೆಲ್ ಟೆಕ್ ಅಗ್ರಿಗೇಟರ್ EaseMyTrip ಸಹ-ಸಂಸ್ಥಾಪಕ ಮತ್ತು ಸಿಇಒ ನಿಶಾಂತ್ ಪಿಟ್ಟಿ ಅವರು “ವೈಯಕ್ತಿಕ ಕಾರಣಗಳಿಂದಾಗಿ” ಬುಧವಾರ ರಾಜೀನಾಮೆ ನೀಡಿದ್ದಾರೆ.
ಪ್ರಸ್ತುತ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ನಿಶಾಂತ್ ಪಿಟ್ಟಿ ಅವರ ಸಹೋದರ ಮತ್ತು ಸಹ-ಸಂಸ್ಥಾಪಕ ರಿಕಾಂತ್ ಪಿಟ್ಟಿ ಅವರನ್ನು ಹೊಸ ಸಿಇಒ ಆಗಿ ನೇಮಿಸಲಾಗಿದೆ.
“ತಮ್ಮ ಹೊಸ ಹುದ್ದೆಯಲ್ಲಿ, ರಿಕಾಂತ್ ಅವರು ಕಂಪನಿಯ ಕಾರ್ಯತಂತ್ರದ ಉಪಕ್ರಮಗಳನ್ನು ಮುನ್ನಡೆಸುತ್ತಾರೆ. ನಾವೀನ್ಯತೆಯನ್ನು ಹೆಚ್ಚಿಸುತ್ತಾರೆ ಮತ್ತು ಉದ್ಯಮದಲ್ಲಿ EaseMyTrip ಸ್ಥಾನವನ್ನು ಇನ್ನಷ್ಟು ಬಲಪಡಿಸಲು ಗ್ರಾಹಕರ ಅನುಭವಗಳನ್ನು ಹೆಚ್ಚಿಸುತ್ತಾರೆ” ಎಂದು ಕಂಪನಿ ತಿಳಿಸಿದೆ.
ಅಂಬಾಲಾದ ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಪದವೀಧರರಾಗಿರುವ ಪಿಟ್ಟಿ ಅವರು 2008 ರಲ್ಲಿ ಸಹೋದರರ ಜತೆ ಸೇರಿ ಕಂಪನಿ ಸ್ಥಾಪಿಸಿದರು. ಅವರು ಪ್ರವಾಸೋದ್ಯಮ, ಪ್ರಯಾಣ, ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನದಲ್ಲಿ ಸುಮಾರು 16 ವರ್ಷಗಳ ಅನುಭವ ಹೊಂದಿದ್ದಾರೆ.
ನಿಶಾಂತ್ ಪಿಟ್ಟಿ, ರಿಕಾಂತ್ ಪಿಟ್ಟಿ ಮತ್ತು ಪ್ರಶಾಂತ್ ಪಿಟ್ಟಿ ಅವರು EaseMyTripನ ಸಹ-ಸಂಸ್ಥಾಪಕರಾಗಿದ್ದಾರೆ.