ಬೆಂಗಳೂರು : ಇತ್ತೀಚಿಗೆ ಬೆಂಗಳೂರು ಸೇರಿದಂತೆ ದೇಶದ ಹಲವು ಕಡೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇಆ) ಅಧಿಕಾರಿಗಳು ಗೇಮಿಂಗ್ ಆ್ಯಪ್ಗಳ ಮೇಲೆ ದಾಳಿ ನಡೆಸಿ ೫೨೭ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಬ್ಯಾಂಕ್ ಖಾತೆ, ಬಾಂಡ್ಗಳು ಮತ್ತು ಮ್ಯೂಚುವಲ್ ಫಂಡ್ಗಳನ್ನು ಜಪ್ತಿ ಮಾಡಿದ್ದಾರೆ. ಹೌದು ಬೆಂಗಳೂರು, ಗುರ್ಗಾವ್ನಲ್ಲಿನ ಗೇಮಿಂಗ್ ಆ್ಯಪ್ `ವಿಂಜೋ’ಗೆ ಸಂಬಂಧಿಸಿದ ಕಚೇರಿಗಳ ಮೇಲೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಸುಮಾರು ೫೦೫ ಕೋಟಿ ರೂ. ಮೌಲ್ಯದ ಬ್ಯಾಂಕ್ ಠೇವಣಿ, ಬಾಂಡ್ಗಳು ಮತ್ತು ಮ್ಯೂಚುವಲ್ ಫಂಡ್ಗಳನ್ನು ಇಡಿ ವಶಪಡಿಸಿಕೊಂಡಿದೆ.
ವಿಂಜೋ ಗೇಮ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಗ್ರಾಹಕರಿಗೆ ಮೋಸ ಮಾಡುತ್ತಿರುವುದು ತನಿಖೆಯಿಂದ ಗೊತ್ತಾಗಿದೆ. ಗೇಮಿಂಗ್ ಹೆಸರಲ್ಲಿ ಕಂಪನಿಯು ರಹಸ್ಯವಾಗಿ ಅಲ್ಗರಿದಮ್ಗಳು ಮತ್ತು ಸಾಫ್ಟ್ವೇರ್ಗಳನ್ನು ಬಳಸಿ ಗ್ರಾಹಕರನ್ನು ಸೋಲಿಸುತ್ತಿತ್ತು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಸರ್ಕಾರವು `ಪ್ರಮೋಷನ್ ಅಂಡ್ ರೆಗ್ಯುಲೇಷನ್ ಆಫ್ ಆನ್ಲೈನ್ ಗೇಮಿಂಗ್ ಆ್ಯಕ್ಟ್ ೨೦೨೫’ ಅಡಿಯಲ್ಲಿ ರಿಯಲ್ ಮನಿ ಗೇಮ್ಗಳನ್ನು ನಿಷೇಧಿಸಿದ್ದರೂ, ಈ ಕಂಪನಿಗಳು ಗ್ರಾಹಕರ ೩೦ ಕೋಟಿ ರೂ. ಅಧಿಕ ಹಣವನ್ನು ವಾಪಸ್ ನೀಡದೆ ತಮ್ಮ ಎಸ್ಕ್ರೊ ಖಾತೆಗಳಲ್ಲಿ ಇರಿಸಿಕೊಂಡಿವೆ. ಕಂಪನಿಯ ನಿರ್ದೇಶಕರ ಮೊಬೈಲ್, ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸುಮಾರು ೧೮.೫೭ ಕೋಟಿ ರೂ. ಇರುವ ೮ ಬ್ಯಾಂಕ್ ಖಾತೆಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ ಎಂದಿದ್ದಾರೆ.



