ಬೆಂಗಳೂರು: ಬೆಂಗಳೂರು ಹಾಗೂ ಮೈಸೂರಿನ ಹಲವು ಕಡೆ ಬಿಲ್ಡರ್ಗಳಿಗೆ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಶಾಕ್ ನೀಡಿ ಮುಂಜಾನೆಯೇ 11 ಕಡೆಗಳಲ್ಲಿ ಬಿಲ್ಡರ್ಗಳ ಮನೆ ಹಾಗೂ ಕಚೇರಿಗಳಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಯುಬಿ ಸಿಟಿಯ ಕಿಂಗ್ ಫಿಶರ್ ಟವರ್, ಮಲ್ಲೇಶ್ವರಂ, ಬಸವೇಶ್ವರನಗರ, ಬನ್ನೇರುಘಟ್ಟ ರೋಡ್, ಹನುಮಂತನಗರ ಹಾಗೂ ಮೈಸೂರಿನ ಎರಡು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿದರು. ಪ್ರತಿಷ್ಠಿತ ಬಿಲ್ಡರ್ಗಳ ಮನೆ ಹಾಗೂ ಕಚೇರಿಗಳು ದಾಳಿಗೆ ಒಳಗಾದವು. ಬೆಳ್ಳಂಬೆಳಗ್ಗೆ ದಾಳಿ ಮಾಡಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು.
ದಾಳಿಗೆ ಒಳಗಾದ ಹಲವು ಬಿಲ್ಡರ್ಗಳ ಹೆಸರು ಸೈಟ್ ಕೊಡಿಸುವುದಾಗಿ ಹೇಳಿ ವಂಚನೆ, ಆಸ್ತಿಪತ್ರ ಅವ್ಯವಹಾರ, ರಿಯಲ್ ಎಸ್ಟೇಟ್ ಆಸ್ತಿಗಳ ಮೌಲ್ಯದಲ್ಲಿ ಅಕ್ರಮ, ತೆರಿಗೆ ನೋಂದಣಿಯಲ್ಲಿ ಕಳ್ಳತನ, ಹೀಗೆ ಹಲವು ಅವ್ಯವಹಾರಗಳಲ್ಲಿ ಕೇಳಿಬಂದಿದೆ ಎನ್ನಲಾಗಿದೆ. ಈ ಬಗ್ಗೆ ನೊಂದವರು ಹಾಗೂ ಬಿಲ್ಡರ್ಗಳ ಸಮೀಪವರ್ತಿಗಳು ದೂರು ನೀಡಿದ್ದು, ದೊರೆತುಬಂದ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಕೆಲವು ತಿಂಗಳ ಹಿಂದೆ ಅಕ್ರಮ ಹಣ ಲೇವಾದೇವಿ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರಿನಲ್ಲಿ ಎಂಟು ಕಡೆ ದಾಳಿ ನಡೆಸಿ 11.5 ಕೋಟಿ ರೂ. ವಶಪಡಿಸಿಕೊಂಡಿದ್ದರು. ಹಣ ಲೇವಾದೇವಿ ಮತ್ತು ಅಕ್ರಮ ವಹಿವಾಟಿಗೆ ಸಂಬಂಧಿಸಿ ಕೆಲವೊಂದು ಮಾಹಿತಿಯನ್ನು ಪಡೆದುಕೊಂಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.