This is the title of the web page
This is the title of the web page

ಶಾಲಾ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಸಜ್ಜು

ಚಾಮರಾಜನಗರ: 2023-24ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದು ಶಾಲಾ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ವಹಿಸಿದೆ.

ಶಾಲೆ, ತರಗತಿ ಕೊಠಡಿ, ಶಾಲಾ ಆವರಣ ಶುಚಿತ್ವಕ್ಕಾಗಿ ಶಾಲಾ ಪ್ರಾರಂಭದ ಹಿಂದಿನ ದಿನವೇ ಶಿಕ್ಷಕರು ಶಾಲೆಗೆ ಹಾಜರಾಗಿ ಅಗತ್ಯ ಕ್ರಮ ವಹಿಸುತ್ತಿದ್ದಾರೆ. ಶಾಲೆಯನ್ನು ಹಸಿರು ತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ವಿಶೇಷವಾಗಿ ಮುಖ್ಯಶಿಕ್ಷಕರು, ಸಹಶಿಕ್ಷಕರು ಆಹ್ವಾನಿಸಲಿದ್ದಾರೆ.

ಅಕ್ಷರ ದಾಸೋಹ ಕಾರ್ಯಕ್ರಮದಡಿ ಸಿಹಿ ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲಾಗುವುದು.
ಈಗಾಗಲೇ ಪಠ್ಯಪುಸ್ತಕ ಮತ್ತು ಸಮವಸ್ತ್ರ ಸರಬರಾಜಾಗಿದ್ದು ಶಾಲಾ ಪ್ರಾರಂಭದ ದಿನವೇ ವಿತರಣೆ ಮಾಡಲು ಸಿದ್ದತೆ ಮಾಡಲಾಗಿದೆ. ಅಕ್ಷರ ದಾಸೋಹ ಕಾರ್ಯಕ್ರಮದ ಮೂಲಕ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಆಹಾರ ನೀಡಲು ಕ್ರಮವಹಿಸಿದೆ.

ಮುಖ್ಯಶಿಕ್ಷಕರು, ಸಹಶಿಕ್ಷಕರು ವಿಶೇಷ ಆಹ್ವಾನಿತರಾಗಿ ಎಸ್.ಡಿ.ಎಂ.ಸಿ ಹಾಗೂ ಪೋಷಕರನ್ನು ಶಾಲೆಗೆ ಕರೆಸಿ ಇಲಾಖೆ ತೆಗೆದುಕೊಂಡಿರುವ ಕಾರ್ಯಕ್ರಮಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಈಗಾಗಲೇ ಇಲಾಖೆಯಿಂದ 2023-24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು ಅದರಂತೆ ಶಾಲೆಯಲ್ಲಿ ಅನುಪಾಲನೆ ಮಾಡಲು ಕ್ರಮವಹಿಸಲಾಗಿದೆ.

ಅನುದಾನ ರಹಿತ ಶಾಲೆಗಳಲ್ಲಿ ಪಡೆಯುವ ಶುಲ್ಕವನ್ನು ಶಾಲಾ ಪ್ರಕಟಣಾ ಫಲಕದಲ್ಲಿ ವೆಬ್‍ಸೈಟ್ ನಲ್ಲಿ ಮತ್ತು ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ಪ್ರಕಟಿಸಿ ಪೋಷಕರು ವೀಕ್ಷಿಸಲು ಸಹಕಾರಿಯಾಗುವಂತೆ ಸೂಚಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ತಾಲೂಕಿನ ವ್ಯಾಪ್ತಿಯ ಶಾಲಾ ಮುಖ್ಯಶಿಕ್ಷಕರ ಸಭೆಯನ್ನು ಕರೆದು ಶಾಲಾ ಪ್ರಾರಂಭೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡಲು ಸೂಕ್ತ ಸಲಹೆ ಮಾರ್ಗದರ್ಶನ ನೀಡಲು ಸೂಚಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.