ಬೆಂಗಳೂರು: ಕೋಟ್ಯಾಂತರ ರೂಪಾಯಿ ದುಡ್ಡಿದ್ದವರೆಲ್ಲ ಕೋವಿಡ್ ಬಂದಾಗ ಮಣ್ಣು ಪಾಲಾದರು. ಆದರೆ ದೇಹದಲ್ಲಿ ಇಮ್ಯೂನಿಟಿ ಪವರ್ ಇದ್ದವರು ಮಾತ್ರ, ಇಂದಿಗೂ ಬದುಕುತ್ತಿದ್ದಾರೆ. ಹಾಗಾಗಿ ಕ್ರೀಡೆ,ದೈಹಿಕ ಚಟುವಟಿಕೆ ಹಾಗೂ ಯೋಗಾಸನ, ಧ್ಯಾನದ ಅಭ್ಯಾಸಗಳು ವ್ಯಕ್ತಿಯ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಪವರ್ಫುಲ್ ಮನಸ್ಸು ಹಾಗೂ ಧನಾತ್ಮಕ ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಸುಂದರ್ ರಾಜ್ ಅವರು ಹೇಳಿದರು.
ಬೆಂಗಳೂರಿನ ಅರಮನೆ ರಸ್ತೆಯ ಸ್ಕೌಟ್ ಅಂಡ್ ಗೈಡ್ ಆಡಿಟೋರಿಯಂ ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಅಲುಮ್ನಿ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ “ಶಾಲಾ-ಕಾಲೇಜುಗಳಲ್ಲಿ ದೈಹಿಕ ಶಿಕ್ಷಣದಿಂದ ಉತ್ತಮ ಆರೋಗ್ಯ” ಕುರಿತ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸರ್ಕಾರವು ಇಂದು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಈಗ ವಿದ್ಯಾರ್ಥಿಗಳ ಕೈನಲ್ಲಿ ಮೊಬೈಲ್ ಇಲ್ಲದ್ದರಿಂದ, ಚಾಕುಗಳನ್ನು ಹಿಡಿದು ಬರುವಂತಹ ವಿದ್ಯಾರ್ಥಿಗಳು ಸಹ ಇದ್ದಾರೆ.
ಈಗ ಪ್ರಸ್ತುತ ನಮ್ಮ ಮುಂದಿರುವ ಸವಾಲು ಎಲ್ಲಾ ವಿದ್ಯಾರ್ಥಿಗಳ ಕೈನಲ್ಲೂ ಚೆಂಡು ಮತ್ತು ರಾಕೆಟ್ಗಳು ಇರಬೇಕಾಗಿದೆ ಈ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಿ ಉತ್ತಮ ಆರೋಗ್ಯದ ಪರಿಕಲ್ಪನೆಗೆ ಹೆಚ್ಚು ಒತ್ತು ನೀಡಿದಂತಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಮುಂದುವರಿದು ಮಾತನಾಡಿದ ಅರಸ್ ಅವರು ದೈಹಿಕ ಶಿಕ್ಷಣವನ್ನೇ ಶಾಲಾ-ಕಾಲೇಜುಗಳಲ್ಲಿ ಮೂಲೆಗುಂಪು ಮಾಡಲು ಹೊರಟಿರುವ ಸರ್ಕಾರದ ತೀರ್ಮಾನಗಳು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಕಲ್ಲು ಸಕ್ಕರೆಯ ಸವಿಯ ಸವಿದವರೇ ಬಲ್ಲರು, ಹಾಗೆ ದೈಹಿಕ ಶಿಕ್ಷಣದ ಮಹತ್ವ ಅದರ ಅರಿವಿದ್ದವರಿಗೆ ಮಾತ್ರವೇ ಗೊತ್ತು,ಎಂದು ಸರ್ಕಾರದ ಕೆಲವು ಗೊಂದಲದ ತೀರ್ಮಾನ ಗಳನ್ನು ಮಾರ್ಮಿಕವಾಗಿ ಛೇಡಿಸಿದರು.
ಬಸವರಾಜ ಹೊರಟ್ಟಿಯವರು ಶಿಕ್ಷಣ ಸಚಿವರಾಗಿದ್ದಾಗ, ತಂದAತಹ ಕಾನೂನನ್ನು ಅವರಿನ್ನೂ ಅಧಿಕಾರದಲ್ಲಿದ್ದಾಗಲೇ ಮೊಟಕು ಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿರುವುದು ಹೊರಟ್ಟಿ ಯವರಿಗೆ ಮಾಡಿದಂತಹ ಅವಮಾನ ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣದ ಪಠ್ಯಗಳನ್ನು ಮಾರ್ಪಡಿಸಿ, ಬದಲಾಯಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಈ ಕೂಡಲೇ ಸರ್ಕಾರವು ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ಡಾ. ಸತ್ಯಮೂರ್ತಿ ಗೂಗಿ , ಪ್ರಾಂಶುಪಾಲ ಡಾ. ಪಿ.ಸಿ. ಕೃಷ್ಣಸ್ವಾಮಿ, ಡಾ. ಆರ್ ಶ್ರೀಕಾಂತ್, ಲೋಕೇಶ್ವರ್, ಬಿಂದೂರಾಣಿ,ಮೇಘನಾ,ಡಾ. ಸುಶಾಂತ್ ಎಸ್ ಪಾಟೀಲ್, ಶಶಿಧರ್ ಎ ಕೇಲ್ಲೂರ್, ಚೌಡಪ್ಪ, ಮಹಾದೇವಸ್ವಾಮಿ, ಡಾ. ವೆಂಕಟೇಶ್,ಡಾ. ನಾಗೇಶ್, ಡಾ. ಶಶಿಕುಮಾರ್ ಸೇರಿದಂತೆ ಹಲವು ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಾರಕ ರೋಗಗಳು ಬಂದಾಗ ದೇಹದಲ್ಲಿ ರೋಗನಿರೋಧಕ ಶಕ್ತಿ ಇದ್ದವರು ಮಾತ್ರವೇ ಬದುಕುತ್ತಾರೆಯೇ ಹೊರತು ದುಡ್ಡಿದ್ದವರಲ್ಲ: ಶಿಕ್ಷಣ ತಜ್ಞ ಡಾ.ಸುಂದರ್ ರಾಜ್ ಅರಸ್



