ಹೊಸಕೋಟೆ: ಶಿಕ್ಷಣ ಇಲಾಖೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳಿದ್ದು ನನ್ನ ಅವಧಿಯಲ್ಲಿ ಅದಕ್ಕೆ ಪರಿಹಾರ ಒದಿಗಿಸುವ ಕಾರ್ಯ ಮಾಡುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿರುವ ಶ್ರೀರಂಗನಾಥ ಪ್ರೌಢಶಾಲೆ ಅವರಣದಲ್ಲಿ ಏರ್ಪಡಿಸಿದ್ದ ಶ್ರೀ ರಂಗನಾಥ ಕಲಾಉತ್ಸವ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿದ್ದರಾಮಯ್ಯ ಅವರು ಶಿಕ್ಷಣ ಪ್ರೇಮಿಗಳಾಗಿ ನಾನು ತೆಗೆದುಕೊಳ್ಳುವ ನಿರ್ದಾರಕ್ಕೆ ಸಮರ್ಪಕವಾಗಿ ಸ್ಪಂದಿಸುತ್ತಿದ್ದಾರೆ. ರಾಜ್ಯದಲ್ಲಿ 43 ಸಾವಿರ ಅತಿಥಿ ಶಿಕ್ಷಕರಿದ್ದು ನನ್ನ ಅವಧಿಯಲ್ಲಿ 12 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಿಕ್ಷಕರ ನೇಮಕಾತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸರಕಾರದೊಂದಿಗೆ ಖಾಸಗಿ ಸಹಭಾಗಿತ್ವ ಸಹ ಅಗತ್ಯವಾಗಿದೆ.
ಈ ದಿಶೆಯಲ್ಲಿ ಸರಕಾರವು ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಗಳಡಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಗಮನಹರಿಸಲಾಗುತ್ತಿದೆ ಎಂದರು.ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಕಲ್ಕುಂಟೆ ಅಗ್ರಹಾರ ಗ್ರಾಮದ ರಂಗನಾಥ ಪ್ರೌಢಶಾಲೆ 1960 ರಲ್ಲಿ 40 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡು ಗ್ರ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ 64 ವರ್ಷ ಪೂರೈಸಿದ್ದು ಪ್ರಸ್ತುತ 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಸಂಸ್ಥಾಪಕರ ದೂರದೃಷ್ಠಿಯ ಪರಿಣಾಮದಿಂದಾಗಿ ಸಂಸ್ಥೆಗೆ ಬಹಳಷ್ಟು ಜಮೀನನ್ನು ಹೊಂದಿದ್ದು, ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪರಿಶ್ರಮದಿಂದಾಗಿ ಸಂಸ್ಥೆಯು ಉತ್ತಮ ಸಾಧನೆ ಮಾಡುತ್ತಿರುವುದು ಅಭಿನಂದನಾರ್ಹ. ಇಲ್ಲಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಿದ್ದು ಪ್ರಥಮ ದರ್ಜೆ ಕಾಲೇಜು ಸಹ ಮಂಜೂರು ಮಾಡಬೇಕು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರ ಜೊತೆ ನಾನು ಹಾಗೂ ಸಚಿವ ಮಧು ಬಂಗಾರಪ್ಪ ಚರ್ಚಿಸಿ ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದರು.
ಪದವಿ ಪೂರ್ವ ಕಾಲೇಜು ಶಿಕ್ಷಣಇಲಾಖೆಯ ಉಪ ನಿರ್ದೇಶಕ ಬಾಲಗುರು ಮೂರ್ತಿ, ಶಿಕ್ಷಣ ಇಲಾಖೆಯ ಗ್ರಾಮಾಂತರ ಜಿಲ್ಲಾ ಉಪ ನಿರ್ದೇಶಕ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಟಿಎಪಿಸಿಎಂಎಸ್ ಅಧ್ಯಕ್ಷ ಮುತ್ಸದ್ರ ಬಾಬುರೆಡ್ಡಿ, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಶಿವಕೇಶವ ರೆಡ್ಡಿ, ಅನುಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಬೋದನಹೊಸಹಳ್ಳಿ ಪ್ರಕಾಶ್, ಮುಖಂಡರಾದ ಯಡಗೊಂಡಹಳ್ಳಿ ರಾಧಾಕೃಷ್ಣ, ಹಾರೋಹಳ್ಳಿ ದೇವರಾಜ್ ಕಲ್ಕುಂಟೆ ಸಂಪಂಗಿರಾಮಣ್ಣ, ಮುನಿರಾಜು, ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಕ್ಷ್ಮಣ್ ಸಿಂಗ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಆಡಳಿತ ಮಂಡಳಿ ಸದಸ್ಯರುಗಳು, ಮುಖ್ಯ ಶಿಕ್ಷಕ ಶಿವಪ್ಪ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.