ಇಂದೋರ್: ಸದ್ಯ ಸಾಗುತ್ತಿರುವ ಐಪಿಎಲ್ನಲ್ಲಿ ಹಲವು ಕೋಟಿ ರೂ.ಗಳ ಬೆಟ್ಟಿಂಗ್ನಲ್ಲಿ ಭಾಗಿಯಾಗಿರುವ ಜಾಲವೊಂದನ್ನು ಭೇದಿಸಿರುವ ಇಂದೋರ್ ಪೊಲೀಸರು ಎಂಟು ಮಂದಿಯನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಟ್ಟಿಂಗ್ ಜಾಲದ ಬಗ್ಗೆ ಸಿಕ್ಕಿದ ಮಾಹಿತಿಯಂತೆ ಬುಧವಾರ ರಾತ್ರಿ ಮಧ್ಯಪ್ರದೇಶದ ಲಸುಡಿಯ ಪ್ರದೇಶದ ಬಹುಮಹಡಿ ಕಟ್ಟಡದ ಫ್ಲ್ಯಾಟೊಂದರಲ್ಲಿ ವೆಬ್ಸೈಟ್ ಮೂಲಕ ಐಪಿಎಲ್ ಪಂದ್ಯಗಳ ಮೇಲೆ ಆನ್ಲೈನ್ನಲ್ಲಿ ಬೆಟ್ಟಿಂಗ್ ಮಾಡುತ್ತಿದ್ದ ವೇಳೆ ಅವರನ್ನು ಬಂಧಿಸಲಾಯಿತು ಎಂದು ಕ್ರೈಮ್ ಬ್ರ್ಯಾಂಚ್ನ ಚ್ಚುವರಿ ಉಪ ಆಯುಕ್ತ ರಾಜೇಶ್ ದಂಡೋಟಿಯ ಹೇಳಿದ್ದಾರೆ.
ಆರೋಪಿಗಳು ನಕಲಿ ಹೆಸರಿನಲ್ಲಿ ಮೊಬೈಲ್ ಫೋನ್ ಸಿಮ್ ಕಾರ್ಡ್ ಪಡೆದಿದ್ದರು ಮತ್ತು ಕ್ಯು ಆರ್ ಕೋಡ್ ಮೂಲಕ ಜನರಿಂದ ಬೆಟ್ಟಿಂಗ್ ಮೊತ್ತವನ್ನು ಸ್ವೀಕರಿಸುತ್ತಿದ್ದರು. ಅವರ ಬೆಟ್ಟಿಂಗ್ ಜಾಲವು ದಿಲ್ಲಿ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳಿಗೆ ಹರಡಿತ್ತು ಎಂದು ಆರೋಪಿಗಳ ವಿಚಾರಣೆ ವೇಳೆ ತಿಳಿದು ಬಂದಿದೆ. ಆರೋಪಿಗಳಿಂದ 22 ಮೊಬೈಲ್, 17 ಚೆಕ್ ಬುಕ್ಸ್, ಐದು ಲ್ಯಾಪ್ಟಾಪ್, 21 ಬ್ಯಾಕ್ ಪಾಸ್ಬುಕ್ಸ್ ಮತ್ತು 31 ಎಟಿಎಂ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.