ಚುನಾವಣೆ ಬರುತ್ತಿದ್ದ ಹಾಗೆ ಎಲ್ಲರಿಗೂ ಒಂದು ರೀತಿಯಲ್ಲಿ ಅಸಡ್ಡೆಯ ಭಾವನೆ ಹೆಚ್ಚು ಆಗುತ್ತದೆ. ಯಾರ ಸರಕಾರ ಬಂದರೆ ಏನು ಬೆಲೆ ಏರಿಕೆ ನಮಗೆ ದುಡಿಯೋದು ತಪ್ಪೋದಿಲ್ಲ ಅಂಬ ಮಾತು ಸಾಮಾನ್ಯ ಕೇಳುವ ವಿಚಾರ ಆದರೆ. ನಾವು ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆನಾವು ಚುನಾಯಿಸಿದವರು ಎಷ್ಟು ದಿನ ನಮ್ಮನ್ನು ಕೂಡಿಸಿ ಊಟಕ್ಕೆ ಹಾಕುತ್ತಾರೆ ಅಥವಾ ಯಾಕೆ ಹಾಕುತ್ತಾರೆ ಎಂಬ ವಿಷಯದ ಅರಿವು ನಮಗೆ ಬರಬೇಕು.
ಇಂತಹ ಅರಾಜಕತೆಯಿಂದ ತಮ್ಮ ದೇಶದ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿಕೊಂಡು ಬೇರೆಯವರು ನೀಡುವ ಸಹಾಯದ ಮೇಲೆ ಅವಲಂಬಿತವಾಗಿರುವ ದೇಶಗಳು ನಮಗೆ ಎಚ್ಚರಿಕೆಯನ್ನು ನೀಡುತ್ತಿವೆ.ನಮಗೆ ಕುಳಿತು ತಿನ್ನುವ ಅಭ್ಯಾಸ ಮಾಡಿಸುವ ಸರಕಾರಗಳು ಅದರ ಹೊರೆಯನ್ನು ನಮ್ಮ ಮೇಲೆ ಹೇರುತ್ತಿವೆ ಅನ್ನುವ ವಿಷಯವನ್ನು ಮರೆಯಬಾರದು.
ಕೇಂದ್ರ ಸರಕಾರವೇ ಇರಲಿ ರಾಜ್ಯ ಸರಕಾರವೇ ಇರಲಿ ಉಚಿತ ಕೊಡುವ ಯಾವುದೇ ಸೌಲಭ್ಯಗಳನ್ನು ತಮ್ಮ ಕಿಸೆಯಿಂದ ಕೊಡುವುದಿಲ್ಲ ಕೊನೆಗೆ ಅದರ ಪರಿಣಾಮ ನಮ್ಮ ತೆರಿಗೆ ಹಣದಿಂದಲೇ ಬರುವುದು ಎಂಬ ಅರಿವು ಪ್ರಜೆಗಳಿಗೆ ಇರಲೇ ಬೇಕು.ಉಚಿತ ಕೊಡಲು ಒಂದು ವರ್ಗ ಬಡವರನ್ನು ಗುರುತಿಸಿ ಕೊಟ್ಟರೇ ಅದಕ್ಕೆ ಅರ್ಥವಿದೆ.
ಇತ್ತೀಚಿಗೆ ಸಾಮಾಜಿಕ ನ್ಯಾಯದ ಮಾತನ್ನು ಹೇಳುತ್ತಾ ಎಲ್ಲ ವರ್ಗದ ಅಂದರೆ ಸಿರಿವಂತರೂ ಸುಳ್ಳು ಮಾಹಿತಿ ನೀಡಿ ಸರಕಾರದ ಸವಲತ್ತುಗಳ ಉಪಯೋಗ ತೆಗೆದುಕೊಳ್ಳುತ್ತಿರುವುದು ಕಾಣಿಸುತ್ತದೆ. ಬಹಳಷ್ಟು ದೇಶಗಳಲ್ಲಿ ಸರಕಾರಗಳು ಅತೀ ಬಡವರ ಯೋಗಕ್ಷೇಮ ನೋಡಿ ಕೊಳ್ಳುತ್ತಾರೆ ನಮ್ಮ ದೇಶದಲ್ಲಿ ಬಡವರಿಗಾಗಿ ರೂಪಿಸಲಾದ ಯೋಜನೆಗಳು ಲಂಚ ಹಾಗೂ ಮೋಸದಿಂದ ಅವಶ್ಯಕತೆ ಇರುವವರವರೆಗೂ ತಲುಪುವುದೇ ಇಲ್ಲ ಎಲ್ಲರಿಗೂ ಕಡಿಮೆ ದರದಲ್ಲಿ ಪದಾರ್ಥಗಳು ದೊರೆತಾಗ ಸಾಮಾಜಿಕ ನ್ಯಾಯ ಬಡವರಿಗೆ ಉಚಿತ ಕೊಟ್ಟರೂ ತಪ್ಪಿಲ್ಲ ಆದರೆ ಇಂದಿನ ಸರಕಾರಗಳ ಯೋಜನೆಗಳು ಬಡವರನ್ನು ಬಡತನದಿಂದ ಮೇಲೆ ಎತ್ತುತ್ತೇವೆ ಎನ್ನುತ್ತಾ ಅವರಿಗೂ ಅನುಕೂಲ ಮಾಡಿಕೊಡುತ್ತಾರೆ.
ಸಿರಿವಂತರೂ ಕೂಡ ಅವರ ಅನುಕೂಲತೆ ಹೆಚ್ಚು ಇರುವುದರಿಂದ ಅವರಿಗೂ ಸಮಸ್ಯೆ ಉಂಟಾಗುವುದಿಲ್ಲ ಆದರೆ ಮಧ್ಯಮ ವರ್ಗದ ಜನರ ಜೀವನ ನರಕವಾಗುತ್ತದೆ. ಅವರು ತೆರಿಗೆಗಳಿಂದ ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ ಆದರೆ ಸಂಬಳದಲ್ಲಿ ಹೆಚ್ಚಳ ಇರುವುದಿಲ್ಲ. ತಮ್ಮ ಅವಶ್ಯಕತೆಗಳನ್ನೂ ಪೂರೈಸುವ ಜೊತೆಗೆ ಯಾರದ್ದೋ ಹೆಸರಿಗೆ ಹೆಚ್ಚು ತೆರಿಗೆ ಕಟ್ಟಿ ಹೈರಾಣ ಆಗುತ್ತಿದ್ದಾರೆ, ಇಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಬೇಕು.
ನಾವು ಚುನಾಯಿಸುವ ಪ್ರತಿನಿಧಿ ನಮ್ಮ ಕ್ಷೇತ್ರದ ಅಭಿವೃದ್ಧಿಯ ಕೆಲಸವನ್ನು ಮಾಡುವಂತಹವನು, ನಾವು ಸಮಸ್ಯೆಗಳನ್ನು ತೆಗೆದುಕೊಂಡು ಹೋದಾಗ ಸ್ಪಂದಿಸುವಂತಹವನು ಆಗಿದ್ದರೆ ಉತ್ತಮ. ಕ್ಷೇತ್ರದ ಅಭಿವೃದ್ಧಿ ಆಗದೇ ಹೋದಾಗ ಜೀವನದ ಗುಣಮಟ್ಟ ಹಾಗೂ ಸೌಕರ್ಯಗಳು ದೊರೆಯುವಲ್ಲಿ ಪಕ್ಷಪಾತವಾಗುತತದೆ.
ಮೂಲಭೂತ ಹಕ್ಕುಗಳಾದ ಕುಡಿಯುವ ನೀರು, ವಿದ್ಯುತ್ ಹಾಗೂ ಡ್ರೈನೇಜ್ ವ್ಯವಸ್ಥೆಗಳು ಸರಿಯಗಿ ಇಲ್ಲದೇ ಹೋದಾಗ ನಮ್ಮ ದುಡಿಮೆಯ 10% ಕೇವಲ ಅದಕ್ಕೆ ಮೀಸಲು ಇಡಬೇಕಾಗುತ್ತದೆ. ಅವ್ಯವಸ್ಥೆಗಳಿಂದ ನಮ್ಮ ಜೀವನ ಚಕ್ರದಲ್ಲಿಯೇ ಏರುಪೇರಾಗುತ್ತದೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಕೆರೆಗಳು ಮುಚ್ಚಿ ಲೇಔಟ್ ಮಾಡುವುದು, ಹೆಚ್ಚು ಮಹಡಿ ಕಟ್ಟಡಗಳಿಗೆ ಅನುಮತಿ ನೀಡುವುದು ಇಲ್ಲಿನ ಬೆಳವಣಿಗೆಗೆ ಬಾಧಕವಾಗುತ್ತ ಇದೆ.
ಒಂದು ರಾಜ್ಯದ ಅಥವಾ ರಾಷ್ಟ್ರದ ಬೆಳವಣಿಗೆ ಆಗ ಬೇಕಾದರೆ ಎಲ್ಲ ಕ್ಷೇತ್ರಗಳಲ್ಲೂ ಸಮ ಪಾಲು ಹಾಗೂ ಸಮನಾದ ಹೂಡಿಕೆ ಆಗಬೇಕಾಗುತತದೆ. ಊರುಗಳು ಬೆಳೆಯುವ ವೇಗದಲ್ಲಿ ಅಲ್ಲಿ ಕೆಲಸಗಳ ಹಾಗೂಉದ್ಯಮಗಳ ಸೃಷ್ಟಿಯಾಗಬೇಕಾಗುತ್ತದೆ. ಅಂತಹ ದೂರದರ್ಶಿ ಗುರಿಯನ್ನು ಹೊಂದಿರುವವರನ್ನು ಆಯ್ಕೆ ಮಾಡಿದಾಗ ನಮ್ಮ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕಾಗಿ ಲೋಕ ಜ್ಞಾನದ ಜೊತೆಗೆ ಮೂಲಭೂತ ವಿದ್ಯಾಭ್ಯಾಸ ಇರುವವರನ್ನೇ ಆರಿಸಬೇಕು.
ಹಿಂದಿನ ಕಾಲದಲ್ಲಿ ರಾಜರಾಗಲು ವಿಶೇಷ ತರಬೇತಿಯ ಅವಶ್ಯಕತೆ ಇರುತ್ತಿತ್ತು. ಇಂದಿಗೂ ಕೂಡ ಒಂದಿಷ್ಟು ವಿದ್ಯೆ ಹಾಗೂ ಸಾಮಾನ್ಯ ಜ್ಞಾನ ಇರುವವರನ್ನೇ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಬೇಕು.ಬೆಳವಣಿಗೆ ಆಧುನಿಕತೆ ಜನರಲ್ಲಿ ಬದಲಾವಣೆ ತಂದರೂ ಗಾಳಿ, ನೀರು ಬೆಳಕು ಇವುಗಳನ್ನು ಎಲ್ಲರಿಗೂ ಸಮನಾಗಿ ಸಿಗುವಂತೆ ಅವಕಾಶ ಕಲ್ಪಿಸುವಲ್ಲಿ ಸರಕಾರಗಳು ಕಾರ್ಯಪ್ರವೃತ್ತವಾಗಬೇಕು. ಸರಿಯಾದ ಯೋಚನೆಗಳು ಯೋಜನೆಗಳು ಇರುವ ಸರಕಾರಗಳನ್ನು ಆರಿಸುವುದು ಉತ್ತಮ.
ಭೌಗೋಳಿಕವಾಗಿ ನಮ್ಮ ದೇಶ ಜನಸಂದಣಿ ಹೆಚ್ಚಿಗೆ ಇದೆ. ನಮ್ಮ ದೇಶದ ವಿಸ್ತೀರ್ಣ ಹಾಗೂ ಭೂಮಿ ಇರುವುದಕ್ಕಿಂತ ಹೆಚ್ಚು ಜನ ಸಂಖ್ಯೆ ಇದೆ. ಜನ ಸಂಖ್ಯಾ ಸ್ಪೋಟವು ನಮ್ಮ ಅಭಿವೃದ್ಧಿಗೆ ಮಾರಕವಾಗುತ್ತದೆ. ಪ್ರಪಂಚದಲ್ಲಿ ಅತ್ಯಂತ ಸಮೃದ್ಧ ಪ್ರಾಕೃತಿಕ ಸಂಪತ್ತನ್ನು ಭಾರತ ಹೊಂದಿದೆ ಇಂತಹ ನಮ್ಮ ಸಂಪತ್ತು ಉಳಿಸಿ ಬೆಳೆಸುವ ಸರಕಾರ ನಮ್ಮ ಆಯ್ಕೆಯಾಗಿರಬೇಕು. ದೇಶದ ಸುರಕ್ಷತೆ ಹಾಗೂ ಅಭಿವೃದ್ಧಿಯ ಯೋಜನೆಗಳಿಗೆ ನಿಮ್ಮ ಮತಗಳನ್ನು ನೀಡಿ.
ಇತ್ತೀಚಿಗೆ ಮಧ್ಯಮವರ್ಗದವರು ಹಾಗೂ ಬಡವರು ಹಣಕ್ಕಾಗಿ ತಮ್ಮ ಮತಗಳನ್ನು ಮಾರಿಕೊಳ್ಳುತ್ತಿದ್ದಾರೆ. ಯಾವ ಅಭ್ಯರ್ಥಿ ಅಥವಾ ಪಕ್ಷ ಹೆಚ್ಚು ಹಣ/ದುಡ್ಡು ಅಥವಾ ಉಡುಗೊರೆ ಕೊಡುತ್ತಾರೆಯೋ ಅವರಿಗೆ ನಮ್ಮ ಮತ ಎನ್ನುವುದು ಬಹಳಷ್ಟು ಜನರ ಅಭಿಮತ ಹಾಗೂ ನಡವಳಿಕೆ ಆಗಿದೆ. ಈ ರೀತಿ ನಿಮ್ಮ ಮತಕ್ಕೆ ಬೆಲೆ ಕಟ್ಟುವುದು ಎಷ್ಟು ಸರಿ ಎಂಬ ವಿಚಾರ ಮಾಡಬೇಕು.
ಅನಕ್ಷರತೆ ಮತ್ತು ಅವಿದ್ಯಾವಂತರು ಈ ರೀತಿ ಮಾಡುತ್ತಾರೆ ಎಂಬ ಮಾತನ್ನು ಹೇಳುತ್ತಾರೆ ಆದರೆ ವಿದ್ಯಾವಂತರು ಕೆಲಸ ಇರುವವರು ಕೂಡ ಮತ ಮಾಡಿಕೊಂಡಿದ್ದು ನೋಡಿದ್ದೇವೆ, ಊರಿಗೆ ಹೋಗಿ ಮತದಾನ ಮಾಡಲು ಅಭ್ಯರ್ಥಿಗಳು ಕೊಡುವ ದುಡ್ಡಿನ ಆಸೆಗೆ ಅವರಿಗೆ ಮತದಾನ ಮಾಡುತ್ತಾರೆ. ಯಾವ ಮತದಾರನ ತಲೆಯಲ್ಲೂ ಇಷ್ಟೆಲ್ಲ ಹಣ ಖರ್ಚು ಮಾಡಿ ಅಧಿಕಾರಕ್ಕೆ ಬರುವವ ಮುಂದೆ ಎಷ್ಟು ಲಾಭ ಮಾಡಿಕೊಳ್ಳಬಲ್ಲ ಎಂಬ ಯೋಚನೆ ಯಾಕೆ ಬರುವುದಿಲ್ಲವೋ ತಿಳಿಯುವುದಿಲ್ಲ.
ಇನ್ನು ನಮ್ಮ ಆಯ್ಕೆಯ ಸಮಯದಲ್ಲಿ ಎರಡು ರೀತಿಯಾಗಿ ಆರಿಸಬಹುದು. ಪ್ರಾಮಾಣಿಕ ಅಭ್ಯರ್ಥಿಗಳು ಮತ್ತು ಚಟುವಟಕೆಯಿಂದ ಇರುವ ಅಭ್ಯರ್ಥಿಗಳು ಎಂಬ ಆಯ್ಕೆ ಇರುತ್ತದೆ. ರಾಜಕಾರಣಕ್ಕೆ ಬರುವವರಲ್ಲಿ 70% ಜನರ ಅದನ್ನು ತಮ್ಮ ಗಳಿಕೆಯ ಮಾಧ್ಯಮವನ್ನಾಗಿ ಮಾಡಿಕೊಂಡೆ ಬಂದಿರುವವರಾಗಿರುತ್ತಾರೆ. ಸಮಾಜ ಸೇವೆಯ ಪರಿಕಲ್ಪನೆ ಈಗ ಉಳಿದಿಲ್ಲ, ಹಿಂದಿನ ಕಾಲದಲ್ಲಿ ಒಬ್ಬ ರಾಜ ಅವನ ಮನೆತನಕ್ಕೆ ನಿಷ್ಠೆ ಎಂಬ ನಿಯಮವಿತ್ತು. ಈಗ ಆಯಾ ಕ್ಷೇತ್ರ್ಕಕೆ ಅವರೇ ರಾಜರು .
ಮತದಾರರು ಈಗ ಅವರ ಕೆಲಸ ಮಾಡಿಕೊಡುವ ತೀವ್ರತೆ ಆಭಿವೃದ್ದಿಯ ಯೋಜನೆಗಳ ಜೊತೆಗೆ ಪ್ರಾಮಾಣಿಕತೆಗೆ ಪ್ರಾಮುಖ್ಯತೆ ಕೊಟ್ಟರೆ ಹೆಚ್ಚು ಸುರಕ್ಷಿತ ಏಕೆಂದರೆ ಲಂಚಕೋರ ಹಾಗೂ ದುರಾಸೆಯ ಜನರು ಗೆಲ್ಲುವುದಕ್ಕಗಿ ಸಾಲ ಮಡಿ ಅಥವಾ ಬೆಋಎಯವರನ್ನು ಹಿಂಸಿಸಿ ಹಣ ತಂದ ಮೇಲೆ ಅದನ್ನು ಪುನಃ ಪಡೆಯುವಲ್ಲಿ ಆಸಕ್ತಿ ಹೊಂದಿರುತ್ತಾರೆಯೇ ಹೊರತು. ಜನರ ಕಲ್ಯಾಣ ಅವರ ಆದ್ಯತೆ ಆಗಿರುವುದಿಲ್ಲ. ಹೀಗಾಗಿ ನಮ್ಮ ಸಂಪರ್ಕಕ್ಕೆ ಸಿಗುವ ನಮಗೆ ಸಮಯಕ್ಕೆ ಆಗುವ ಸಮಾಜ ಸೇವೆಯ ಗುರಿಯನ್ನು ಹೊಂದಿರುವವರನ್ನು ಅಋಸಿ ಮುಂಬರುವ ಸಂಕಷ್ಟಗಳಿಂದ ಪಾರಾಗಬೇಕು.
ಮತದಾನದ ಬಗೆಗೆ ಬಹಳಷ್ಟು ಜನರಕ್ಕೆ ಅಸಡ್ಡೆಯಿದೆ ನನ್ನೊಬ್ಬರ ಮತದಿಂದ ಏನಾಗಬೇಕು ಅಂಬ ತಾತ್ಸಾರ ಹೀಗಾಗಿ ಮತದಾನದ ಶೇಕಡಾ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಅಭಿವೃದ್ಧಿ ಮತ್ತು ಉತ್ತಮ ಆಯ್ಕೆಯ ಅವಕಾಶಗಳು ಕಡಿಮೆಯಾಗುತ್ತಿದೆ. ಜನರು ಎಚ್ಚೆತ್ತುಕೊಂಡು ಸಾಧ್ಯವಾದಷ್ಟು ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಬೇಕು
-ಮಾಧುರಿ ದೇಶಪಾಂಡೆ, ಬೆಂಗಳೂರು