ಬೆಂಗಳೂರು ನಗರ ಜಿಲ್ಲೆ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು. ಈಗಾಗಲೇ ಚುನಾವಣಾ ಕರ್ತವ್ಯ ನಿರ್ವಹಣೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಆದೇಶಿಸಲಾಗಿದೆ.
ಯಾವುದೇ ಅಧಿಕಾರಿಗಳು ಚುನಾವಣೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಈ ತರಬೇತಿ ಮೂಲಕ ಅಧಿಕಾರಿಗಳು ತಿಳಿದುಕೊಳ್ಳಬಹುದು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ ಅವರು ತಿಳಿಸಿದರು.
ನಗರದ ದೇವರಾಜ ಅರಸು ಭವನದ ಸಭಾಂಗಣದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವೆಣೆ-2024ರ ಸಂಬಂಧ ಎಂಸಿಸಿ ತಂಡ, ಎಂಸಿಎಂಸಿ ತಂಡ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ನಡೆಸಲು ವಿವಿಧ ವಿಭಾಗಗಳಿಂದ ಜಿಲ್ಲೆಯ ನೋಡಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚುನಾವಣಾ ತರಬೇತಿಗೆ ಹಾಜರಾಗಿರುವುದಾಗಿ ತಿಳಿಸಿದರು.
ಎಫ್.ಎಸ್.ಟಿ, ಎಸ್ ಎಸ್ ಟಿ ಹಾಗೂ ಇತರೆ ತಂಡಗಳ ಮಧ್ಯ ಪರಸ್ಪರ ಸಮನ್ವಯ ಸಂವಹನ ಇರಬೇಕು, ಚುನಾವಣಾ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಮಾಡಬೇಕು. ಕಣ್ ತಪ್ಪಿನಿಂದಲೂ ಸಹ ಯಾವುದೇ ಚುನಾವಣಾ ಕರ್ತವ್ಯ ಲೋಪವಾಗದಂತೆ ಕ್ರಮವಹಿಸಬೇಕೆಂದು ಹೇಳಿದರು.
ಚುನಾವಣೆಗೆ ಮುಂಚಿತವಾಗಿ ತರಬೇತಿಯನ್ನು ನೀಡಲಾಗಿದೆ ಯಾವಾಗ ನೀತಿ ಸಂಹಿತೆ ಜಾರಿಯಾಗುತ್ತದೆ ಎಂದು ಗೊತ್ತಿಲ್ಲ, ನಾವೆಲ್ಲರೂ ಒಗ್ಗಟಾಗಿ ಕೆಲಸ ನಿರ್ವಹಿಸಬೇಕು, ತಂಡಗಳು ತಮಗೆ ನೇಮಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಯಾವುದೇ ತರಹದ ಘಟನೆಯನ್ನು ನಡೆಯದ ಹಾಗೆ ಯಶಸ್ವಿಯಾಗಿ ಚುನಾವಣೆ ನಡೆಸೋಣ ಎಂದು ತಿಳಿಸಿದರು.
ಮಾಸ್ಟರ್ ಟ್ರೇನರ್ ಡಾ. ಕೆಂಪೇಗೌಡ.ಪಿ ಇವರುಪಿ.ಪಿ.ಟಿ ಮೂಲಕ ತರಬೇತಿದಾರರಿಗೆ ಮಾಹಿತಿಯನ್ನು ನೀಡಿದರು. ಅಪರ ಜಿಲ್ಲಾಧಿಕಾರಿಗಳಾದ ಕೆ.ಕೃಷ್ಣಮೂರ್ತಿ, ಉತ್ತರ ತಾಲ್ಲೂಕು ಉಪವಿಭಾಗಧಿಕಾರಿಗಳಾದ ಪ್ರಮೋದ್ ಪಾಟೀಲ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.