ನೆಲಮಂಗಲ ಮೂಲದವರಾದ ಅನಂತರಾಯಪ್ಪ ವೃತ್ತಿಯಲ್ಲಿ ಹಿರಿಯ ವಕೀಲ. ಪ್ರವೃತ್ತಿಯಲ್ಲಿ ನಟ,ನಿರ್ದೇಶಕ. ಈ ಹಿಂದೆ ಸಮಾನತೆಯ ಕಡೆಗೆ ಸಿನಿಮಾವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.
ಇದರ ಅನುಭವದಿಂದಲೇ ಈಗ ಮತದಾರ ಪ್ರಭುಗಳು ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ, ನಿರ್ದೇಶನ ಹಾಗೂ ಮುಖ್ಯ ಪಾತ್ರದಲ್ಲಿ ವಕೀಲನ ಪಾತ್ರಕ್ಕೆ ಬಣ್ಣ ಹಚ್ಚುವುದಲ್ಲದೆ ಮಾಡ್ರನ್ ಫಿಲಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ.
ಹೆಸರೇ ಹೇಳುವಂತೆ ಇದೊಂದು ಮತದಾರರಿಗೆ ಜಾಗೃತಿ ಮೂಡಿಸುವ ಅಂಶಗಳನ್ನು ಒಳಗೊಂಡಿದೆ.
ಕಥಾನಾಯಕ ವಕೀಲ. ಸಂಘ ಕಟ್ಟಿಕೊಂಡು ಭ್ರಷ್ಟಚಾರದ ವಿರುದ್ದ ಹೋರಾಟ ಮಾಡುತ್ತಿರುತ್ತಾರೆ. ಅದು ಫಲ ಕೊಡದೆ ಇದ್ದಾಗ, ಅನಿವಾರ್ಯವಾಗಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ, ಸಣ್ಣದೊಂದು ಸಾಕ್ಷ್ಯಚಿತ್ರ ಸಿದ್ದಪಡಿಸಿ, ಪ್ರದರ್ಶನ ಏರ್ಪಡಿಸುತ್ತಾರೆ. ಇದರಿಂದ ರಾಜ್ಯದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಅದು ಏನು ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು. ಇದರಲ್ಲಿ ಯಾವುದೇ ಪಕ್ಷವನ್ನು ಬಿಂಬಿಸದೆ, ವೈಯಕ್ತಿಕ ಹೆಸರನ್ನು ಬಳಸದೆ, ಮುಕ್ತವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ದೇಶದ ಪ್ರಜೆಯಾಗಿ ನಮ್ಮ ಜವಬ್ದಾರಿ ಏನು? ಎಂತಹವರಿಗೆ ಮತ ಚಲಾಯಿಸಬೇಕು, ಚಲಾಯಿಸಬಾರದು. ದುಡ್ಡಿಗಾಗಿ ಆಸೆ ಪಡದೆ, ಉಡುಗೊರೆ ಅಮಿಷಕ್ಕೆ ಒಳಗಾಗದೆ, ಜಾತಿಯ ಪ್ರೇಮಕ್ಕೆ ಬಲಿಯಾಗದೆ, ಪಾರದರ್ಶಕವಾಗಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಜನಗಳು ಮನಸ್ಸು ಮಾಡಿದರೆ ಮಾತ್ರ ಪರಿಶುದ್ದ ರಾಜಕೀಯ ತರಬಹುದು ಎಂಬುದನ್ನು ಸಂದೇಶದೊಂದಿಗೆ ಹೇಳಲಾಗಿದೆ.
ತಾರಾಗಣದಲ್ಲಿ ನೊಣವಿನಕೆರೆ ರಾಮಕೃಷ್ಣಯ್ಯ, ಜಯರಾಂ, ಹನುಮಂತರಾಜು, ಕಮ್ತೂರು, ತ್ರಿವೇಣಿ, ರಾಜಲಕ್ಷೀ ಮುಂತಾದವರು ನಟಿಸಿದ್ದಾರೆ. ಸಂಗೀತ ವೇಣುಗೋಪಾಲ್, ಹಿನ್ನಲೆ ಶಬ್ದ ವೆಂಕಟೇಶ್, ಛಾಯಾಗ್ರಹಣ ಅಚ್ಚುಸುರೇಶ್, ಸಂಕಲನ ಗಂಗಾಧರ್, ನೃತ್ಯ ಸದಾರಾಘವ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಮುಂದಿನ ಪೀಳಿಗೆ, ಅದರಲ್ಲೂ ವಿದ್ಯಾರ್ಥಿ ಸಮುದಾಯದಲ್ಲಿ ಮತ ಚಲಾವಣೆ ಮಹತ್ವದ ಬಗ್ಗೆ ಅರಿವು ಮೂಡಿಸಲು ಕರ್ನಾಟಕದ ಎಲ್ಲಾ ಸ್ಥಳಗಳಾದ ಕಾಲೇಜು, ವಿಶ್ವವಿದ್ಯಾಲಯಗಳು ಹಾಗೂ ತಾಲ್ಲೋಕು ಮಟ್ಟದ ಚಿತ್ರಮಂದಿರದಲ್ಲಿ ಒಂದು ಪ್ರದರ್ಶನವನ್ನು ಸಾರ್ವಜನಿಕರಿಗೆ ಉಚಿತವಾಗಿ ತೋರಿಸಲು ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ಚಾಲನೆ ಸಿಕ್ಕಿದೆ.
ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಚಿತ್ರ ನೋಡಲು ಬಯಸಿದಲ್ಲಿ ಅಂತಹವರಿಗೂಸಹ ಉಚಿತವಾಗಿ ತೋರಿಸಲು ಸಿದ್ದರಿದ್ದು, ತಮ್ಮನ್ನು ಸಂಪರ್ಕಿಸಬಹುದೆಂದು (ಸಂ.9449458392) ನಿರ್ಮಾಪಕರು ತಿಳಿಸಿದ್ದಾರೆ. ಸೆನ್ಸಾರ್ನಿಂದ ಪ್ರಶಂಸೆಗೆ ಒಳಪಟ್ಟಿದ್ದು ಯು ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರವು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.