ಆನೇಕಲ್: ಬೆಸ್ಕಂ ಆನೇಕಲ್ ಉಪ ವಿಭಾಗದ ವತಿಯಿಂದ ವಿದ್ಯುತ್ ಸುರಕ್ಷತಾ ಜಾತಾವನ್ನು ಹಮ್ಮಿಕೊಳ್ಳಲಾಯಿತು.ತಾಲ್ಲೂಕಿನ ಪ್ರಮುಖ ಬೀದಿಗಳಲ್ಲಿ ಬೆಸ್ಕಂ ಸಿಬ್ಬಂದಿಗಳು, ಸಾರ್ವಜನಿಕರು ವಿದ್ಯುತ್ ತಂತಿಗಳನ್ನು ಮುಟ್ಟಬೇಡಿ, ವಿದ್ಯುತ್ ಕಂಬಗಳಿಂದ ಅಂತರ ಕಾಯ್ದುಕೊಳ್ಳಿ, ನಮ್ಮ ನಡೆ ಗ್ರಾಹಕರ ಕಡೆಗೆ ಎಂಬಂತಹ ಘೋಷಣೆಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಿದರು.
ಬೆಸ್ಕಂ ಆನೇಕಲ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸ್ಟ್ಯಾನ್ಲಿ ಜೋನ್ಸ್ ಮಾತನಾಡಿ, ಬೆಸ್ಕಂ ಸಿಬ್ಬಂದಿಗಳಿಗೆ ವಿದ್ಯುತ್ ಸಂರಕ್ಷಣೆಯ ಕುರಿತು ಹೆಚ್ಚಿನ ಅರಿವು ಇರುತ್ತದೆ. ಆದರೆ, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆಂದು ತಿಳಿಸಿದರು.
ಬೆಸ್ಕಂ ಆನೇಕಲ್ ವಿಭಾಗಕ್ಕೆ 160ಕ್ಕೂ ಹೆಚ್ಚು ಸಿಬ್ಬಂದಿಗಳು ಇರಬೇಕಿತ್ತು. ಆದರೆ, ಸದ್ಯ ಇರುವುದು ಕೇವಲ 39 ಸಿಬ್ಬಂದಿಗಳು ಮಾತ್ರ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಹಂತ ಹಂತವಾಗಿ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲಾಗುವುದೆಂದು ಎಂದು ಅವರು ತಿಳಿಸಿದ್ದಾರೆ. ಈ ವೇಳೆ ಎಇ ಚಂದ್ರು ಸೇರಿದಂತೆ ಹಲವರು ಭಾಗವಹಿಸಿದ್ದರು.