ಅದೊಂದು ಕಲಾತ್ಮಕ ರಂಗಸಜ್ಜಿಕೆ. ಗಂಧರ್ವಲೋಕವೇ ಧರೆಗಿಳಿದಂಥ ಕುಸುರಿಗೆಲಸದ ದ್ವಾರಗಳು, ಮಂಗಳ ಕಲಶಗಳು, ತೂಗುದೀಪಗಳ ಗೊಂಚಲು. ಪುಷ್ಪಾಲಂಕಾರಗೊಂಡ ಕಣ್ಮನ ಸೂರೆಗೊಂಡ ಭವ್ಯವಾದ ವಾತಾವರಣ. ದೇವಲೋಕದ ಚೆಲುವ ನರ್ತಕಿಯ ನಾಟ್ಯವಿಲಾಸಕ್ಕೆ ಹೇಳಿಮಾಡಿಸಿದಂಥ ವೇದಿಕೆಯ ಮೇಲೆ ಶಿಲಾಬಾಲಿಕೆಯಂಥ ಮಾಟವಾದ ಅಂಗಸೌಷ್ಟವವುಳ್ಳ ಸುಂದರ ಕಲಾವಿದೆ ನಿತ್ಯಾ ರಮೇಶ್ ದೈವೀಕವಾಗಿ ನರ್ತಿಸುತ್ತಿದ್ದಳು.
ಅಂದವಳ ಮೊದಲ ಹೆಜ್ಜೆ-ಗೆಜ್ಜೆಗಳ ಸಂಭ್ರಮದ ದಿನ. ಗುರು ಮಂಜುಳಾ ಪರಮೇಶ್ ಬಳಿ ನುರಿತ ನಾಟ್ಯ ತರಬೇತಿ ಪಡೆದ ಅವಳು ಇಡೀ ರಂಗವನ್ನು ಆಕ್ರಮಿಸಿಕೊಂಡು ಲೀಲಾಜಾಲವಾಗಿ ಚಲಿಸುತ್ತ ತನ್ನ ಮನಮೋಹಕ ನೃತ್ಯಾಭಿನಯದ ಚೆಲುವನ್ನು ಚೆಲ್ಲಿದಳು.ಸಾಂಪ್ರದಾಯಕ `ಪುಷ್ಪಾಂಜಲಿ’ಯಿಂದ ನರ್ತನ ಶುಭಾರಂಭವಾಯಿತು. `ಯಾಕುಂದೆಂದು ಹಾರ ಧವಳ…’ ಯಶೋ ಸರಸ್ವತಿ, ಲಕ್ಷ್ಮೀ,ಪಾರ್ವತಿ ತ್ರಿಮಾತೆಯರ ಸ್ತೋತ್ರದೊಂದಿಗೆ, ಗುರು ಬ್ರಹ್ಮನ ಕೀರ್ತನೆ ನಡೆದು, ಶಿವನ ಆನಂದ ನರ್ತನದ ಸೊಬಗನ್ನು ಬೀರಿದಳು.
ನಗುಮುಖದ ಅಂಗಶುದ್ಧ ನೃತ್ಯ `ಶಂಕರ ಶ್ರೀಗಿರಿ ನಾದಪ್ರಭು…’ ವಿನ ಅರ್ಚನೆಯಲ್ಲಿ ಶಿವನ ಸಮಸ್ತ ಆಭರಣಗಳ ವೈಶಿಷ್ಟ್ಯ, ಅಪೂರ್ವ ಭಂಗಿಗಳ ಮಹೋನ್ನತಿಯನ್ನು ಅನಾವರಣಗೊಳಿಸಿದಳು ಕಲಾವಿದೆ.ಮುಂದೆ- ರಾಮಾಯಣದ ವಿಭಿನ್ನ ಕಥೆಯನ್ನು ನಾಟಕೀಯ ಆಯಾಮದಲ್ಲಿ ಅನಾವರಣಗೊಳಿಸಿದ `ರಾಮಾಯ ತುಭ್ಯಂ ನಮಃ’-ನವಪ್ರಯೋಗವನ್ನು ಕಲಾವಿದೆ ತನ್ನ ಸೊಗಸಾದ ಅಭಿನಯ-ನೃತ್ತ ಮಾಧುರ್ಯದ ಸೊಗಡಿನಲ್ಲಿ ವರ್ಣರಂಜಿತವಾಗಿ ತೆರೆದಿಟ್ಟಳು. `ಜಯತು ಜಯತು ರಾಮಚಂದ್ರ…’ ಎಂಬ ಭಕ್ತಿಭಾವದಲ್ಲಿ ನಿತ್ಯಾ, ಶ್ರೀರಾಮನ ದಿವ್ಯ ವ್ಯಕ್ತಿತ್ವವನ್ನು ಕಟ್ಟಿಕೊಡುವ ರಾಮಾಯಣದ ಪ್ರಮುಖ ಘಟನೆಗಳನ್ನು ಚಿತ್ರಿಸುತ್ತ ಹೋದಳು.
ಕಷ್ಟತಮವಾದ `ವರ್ಣ’ಕ್ಕೆ ಸಮನಾಗಿದ್ದ ಈ ಕೃತಿ ಕಲಾವಿದೆಯ ನೃತ್ಯಾಭಿನಯದ ಸಾಮರ್ಥ್ಯಕ್ಕೆ ಸಾಕ್ಷೀಭೂತವಾಯಿತು.ಪ್ರಸ್ತುತಿಯ ಪ್ರಮುಖ ಭಾಗ `ವರ್ಣ’-ಸುದೀರ್ಘ ಬಂಧ. `ಮಾತೆ ಮಲಯಧ್ವಜ ಪಾಂಡ್ಯ ಸಂಜಾತೆ’- ಮುತ್ತಯ್ಯ ಭಾಗವತರ್ ರಚಿಸಿದ `ಧರು ವರ್ಣ’ `ದೈವೀಕ ಆಯಾಮದಲ್ಲಿ ಪ್ರಸ್ತುತಗೊಂಡಿತು. ಗುರು ಮಂಜುಳಾ ಮತ್ತು ಗುರುಪುತ್ರಿ ಶಾಲಿನಿ ಅವರ ಸ್ಫುಟವಾದ ನಟುವಾಂಗದ ಲಯಕ್ಕೆ ಶಕ್ತಿಶಾಲಿಯಾದ ಹೆಜ್ಜೆ-ಗೆಜ್ಜೆಗಳ ಪರಿಪೂರ್ಣತೆಯಲ್ಲಿ ಕಲಾವಿದೆ ಚೈತನ್ಯಪೂರ್ಣವಾಗಿ ನರ್ತಿಸಿದಳು.
ಆಕೆ ತೋರಿದ ವಿವಿಧ ವಿನ್ಯಾಸದ ಆಕರ್ಷಕ ಯೋಗದ ಭಂಗಿಗಳು ಅಚ್ಚರಿಯನ್ನುಂಟು ಮಾಡಿದವು.. ಮುಂದೆ- ಪುರಂದರದಾಸರ `ಜಗನ್ಮೋಹನನೆ ಕೃಷ್ಣ’ ನನ್ನು ಕಲಾವಿದೆ, ತನ್ನ ಭಕ್ತಿ ಪುರಸ್ಸರ ತಲ್ಲೀನತೆಯ ರಮ್ಯಾಭಿನಯದಿಂದ ಸಾಕ್ಷಾತ್ಕಾರಗೊಳಿಸಿದ್ದಳು. ಪಾತ್ರವೇ ತಾನಾಗಿ ಆಕೆ ಶ್ರೀಕೃಷ್ಣನ ಮೋಡಿಗೆ ಪರವಶಗೊಂಡಿದ್ದಳು. ಚೈತನ್ಯದಾಯಕ `ದಶಾವತಾರ’ಗಳ ನಿರೂಪಣೆ, ತಿಲ್ಲಾನ’ -ದಲ್ಲಿ ಅಭಿವ್ಯಕ್ತಗೊಂಡ ಅಂಗಶುದ್ಧ ಜತಿಗಳ ಝೇಂಕಾರ, ಭಂಗಿಗಳ ಭವ್ಯತೆ, ಸವಾಲ್-ಜವಾಬ್ ಮಾದರಿಯಲ್ಲಿದ್ದ `ಗೆತ್ತು’ ನಿರ್ವಹಣೆ,ಕಲಾವಿದೆಯ ಸಾಮರ್ಥ್ಯವನ್ನು ಸಶಕ್ತವಾಗಿ ಬಿಂಬಿಸಿತು.