ದೇವನಹಳ್ಳಿ: ತಾಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕೇನಹಳ್ಳಿ-ಮಲ್ಲೇನಹಳ್ಳಿ ಜೋಡಿ ಗ್ರಾಮಕ್ಕೆ ಸೇರಿದ ಗ್ರಾಮಠಾಣೆಯ ಸ.ನಂ.37 ರಲ್ಲಿ 6-18 ಗುಂಟೆ ಜಮೀನನ್ನು, ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್ ಅವರ ಕುಟುಂಬದವರು ಭೂ ಕಬಳಿಕೆ ಮಾಡಿದ್ದು, ಕೂಡಲೇ ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ಗ್ರಾಮಸ್ಥರ ಒತ್ತಾಯ ಎಂದು ಕೆಆರ್ಎಸ್ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್.ಎಂ ಹೇಳಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೇವನಹಳ್ಳಿಯ ಬೀರಸಂದ್ರದ ಜಿಲ್ಲಾಡಳಿತ ಭವನದ ಮುಂದೆ, ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಗ್ರಾಮಸ್ಥರು, ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೂ ಸಹ ಮನವಿ ಸಲ್ಲಿಸಿದ್ದಾರೆ.
ಗ್ರಾಮಸ್ಥರು, ಹಾಗೂ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು, ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿರುವ ಒಂದೇ ಕುಟಂಬಕ್ಕೆ ಪುನಃ 6 ಎಕರೆ 18 ಗುಂಟೆ ಜಮೀನು ಮಂಜೂರು ಮಾಡುವಂತೆ ಸರ್ಕಾರ ನಡಾವಳಿ ಮಾಡುವ ಮೂಲಕ ಭೂ ಮಾಫಿಯಾಗೆ ಕುಮ್ಮಕ್ಕು ನೀಡುತ್ತಿದೆ. ಇದೇ ಮಾರ್ಚ್ 31ರ ಒಳಗಾಗಿ ಕೂಡಲೆ ಸೂಕ್ತ ತನಿಖೆ ಕೈಗೊಂಡು ಭೂ ಒತ್ತುವರಿಯನ್ನು ತೆರುವು ಮಾಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಹಿರಿಯ ವಕೀಲ ಸಿದ್ದಾತ್ ಮಾತನಾಡಿ ಬಲಾಡ್ಯರಿಗೆ ಮಾತ್ರ ಇಂದಿನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕಾರ್ಯನಿರ್ವಹಿಸುತ್ತಿದೆ ,ಬಡವರಿಗೆ ಮೂಲಸೌಕರ್ಯಗಳನ್ನು ಒದಗಿಸುವ ಕನಿಷ್ಠ ಪ್ರಜ್ಞೆಯೂ ಸಹ ಇಲ್ಲದಂತಾಗಿದೆ ಕೇವಲ ಹಣದಾಸೆಗೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿದೆ. ಎಂ.ಆರ್.ಸೀತಾರಾಮ್ ಅವರ ಕುಟುಂಬದವರು, ಭೂ ಸಾಗುವಳಿ ಮಾಡುತ್ತಿಲ್ಲ ,ಸಾವಿರಾರು ಕೋಟಿ ರೂ.ಗಳು ಗಳಿಸಿಕೊಳ್ಳುವವರಿಗೆ ಪುನಃ ಭೂಮಿ ಮಂಜೂರು ಮಾಡುತ್ತಾರೆ, ಇದು ಅಧಿಕಾರ ದುರ್ಬಳಕೆಗೆ ಸೂಕ್ತ ಉದಾಹರಣೆಯಾಗಿದೆ ಎಂದರು.
ಈ ಗ್ರಾಮದಲ್ಲಿ ನೂರಾರು ವರ್ಷಗಳಿಂದ ವಾಸವಾಗಿರುವ ನಿವಾಸಿಗಳನ್ನು ಒಕ್ಕಲೆಬ್ಬಿಸಿ, ಅಲ್ಲಿಂದ ಓಡಿಸಿದ್ದಾರೆ. ಈಗ ಭೂಮಿಯನ್ನು ಕಬಳಿಕೆ ಮಾಡುತ್ತಿದ್ದಾರೆ. ಈ ಭೂಮಿಯ ಕುರಿತು, ಹೈಕೋರ್ಟ್ ನಿರ್ದೇಶನ ಭೂಮಿಯ ಒತ್ತುವರಿ ತೆರವು ಮಾಡುವಂತೆ ಹೇಳಿದೆಯಾದರೂ, ಯಾವ ಅಧಿಕಾರಿಯೂ ತೆರವು ಗೊಳಿಸುವ ಧೈರ್ಯ ತೋರಿಸುತ್ತಿಲ್ಲ. ಯಾವುದೇ ಕಾರಣಕ್ಕೂ ಭೂಮಿ ಮಂಜೂರು ಮಾಡಲು ಅವಕಾಶ ನೀಡಬಾರದು. 6 ಎಕರೆ 18 ಗುಂಟೆ ಜಮೀನು ಸಂಪೂರ್ಣವಾಗಿ, ಗ್ರಾಮಸ್ಥರಿಗೆ ಸೇರಬೇಕು.ಹಲವಾರು ವರ್ಷಗಳಿಂದ ಈ ರೀತಿಯ ಅನ್ಯಾಯ ನಡೆಯುತ್ತಿದೆ ಗ್ರಾಮಸ್ಥರಿಗೆ ಕಿರುಕುಳ ದೌರ್ಜನ್ಯ ಎಸುಗುತ್ತಿದ್ದಾರೆ, ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಸರ್ಕಾರಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳದೇ ಅವರಿಗೆ ಮಂಜೂರು ಮಾಡಿದರೆ, ನಾವು ತೀವ್ರವಾದ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ಗೌರವಾಧ್ಯಕ್ಷರಾದ ವೆಂಕಟೇಶ್ ಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯದರ್ಶಿ ಸುಬ್ರಮಣಿ, ಅಂಬೇಡ್ಕರ್ ಸೇನೆಯ ತಾಲೂಕು ಅಧ್ಯಕ್ಷ ರಾಯಸಂದ್ರ ಸೋಮಶೇಖರ್, ಊರಿನ ಗ್ರಾಮಸ್ಥರು ಮತ್ತು ಹಿರಿಯ ಹೋರಾಟಗಾರರಾದ ನಾಗರಾಜ್, ಕೃಷ್ಣಪ್ಪ, ಸಿದ್ದಾರ್ಥ್ ಸೇರಿದಂತೆ ಹಲವು ಗ್ರಾಮಸ್ಥರು ಮತ್ತು ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.
ಅಕ್ಲೇನಹಳ್ಳಿ – ಮಲ್ಲೇನಹಳ್ಳಿ ಜೋಡಿ ಗ್ರಾಮದಲ್ಲಿ ಸರ್ಕಾರಿ ಭೂಮಿಯ ಒತ್ತುವರಿ ಹಾಗೂ ಭೂ ಹಗರಣ ಎಂಎಲ್ಸಿ ಎಂ.ಆರ್.ಸೀತಾರಾಮ್ ಅವರ ಕುಟುಂಬದವರ ಮೇಲೆ ಭೂ ಕಬಳಿಕೆ ಆರೋಪ



