ಕೋಲಾರ: ಆಧುನಿಕ ಯುಗದಲ್ಲಿ ಮನುಷ್ಯರ ದುರಾಸೆಯಿಂದ ಪರಿಸರದ ಮೇಲೆ ಅಕ್ರಮಣ ಮಾಡಿ ಅಮೂಲ್ಯವಾದ ಜೀವನಕ್ಕೆ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ ಎಂದು ಕೋಲಾರ ನಗರಠಾಣೆ ವೃತ್ತ ನಿರೀಕ್ಷಕ ಎಂ.ಸದಾನಂದ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ರೆಸ್ಟ್ಲೆಸ್ ಡೆವಲಪ್ಮೆಂಟ್ ಹಾಗೂ ಗ್ರಾಮ ವಿಕಾಸ ಸಂಯೋಜನೆಯಲ್ಲಿ ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ಮತ್ತು ಗ್ರೀನ್ ವಾರಿಯರ್ಸ್ ಸಹಯೋಗದಲ್ಲಿ ಹವಾಮಾನ ಬದಲಾವಣೆಯಲ್ಲಿ ಯುವಜನರ ಪಾತ್ರ ಪರಿಸರ ಮತ್ತು ಕಾನೂನು ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾವೆಲ್ಲಾ ಜೀವಿಸುತ್ತಿರುವುದು ಪರಿಸರದಿಂದ, ಪರಿಸರ ಸ್ವಚ್ಛತೆ ತುಂಬಾ ಮುಖ್ಯ. ಮನುಷ್ಯನ ದುರಾಸೆಗೆ ಪರಿಸರ ಬಲಿಯಾಗುತ್ತಿದೆ. ಪರಿಸರ ವಿರುದ್ದ ನಾವು ಹೋಗಬಾರದು.
ಪರಿಸರಕ್ಕೆ ವಿರುದ್ಧವಾದರೆ ನಮಗೆ ಉಳಿಗಾಲವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕೆಂದರು.ಪರಿಸರದ ಮೇಲೆ ಮಾಡುತ್ತಿರುವ ಆಕ್ರಮಣದಿಂದ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ರೋಗರುಜಿನುಗಳು ಹೆಚ್ಚಾಗುತ್ತಿವೆ. ಪ್ಲಾಸ್ಟಿಕ್ ಮತ್ತು ರಸಗೊಬ್ಬರಗಳ ಮಿತಿಮೀರಿದ ಪರಿಣಾಮ ನಮ್ಮ ಆರೋಗ್ಯ ಕೆಡುತ್ತಿದೆ. ಇನ್ನಾದರೂ ಪರಿಸರ ಉಳಿಸಲಿಕ್ಕೆ ನಾವು ಮೊದಲು ಜಾಗೃತರಾಗಿ ಇತರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.
ಗ್ರಾಮ ವಿಕಾಸ ಸಂಸ್ಥೆಯ ಎಂ.ವಿ.ಎನ್.ರಾವ್ ಮಾತನಾಡಿ ಮುಂದಿನ ಪೀಳಿಗೆ ಉಳಿಯಬೇಕಾದರೆ ಹವಾಮಾನದ ಬಗ್ಗೆ ತಿಳುವಳಿಗೆ ಬಹಳ ಮುಖ್ಯ. ಪ್ಲಾಸ್ಟಿಕ್ ನಿಷೇಧಿಸುವುದು ಒಂದು ಭಾಗ, ಈ ನಿಟ್ಟಿನಲ್ಲಿ ಈ ವಿಷಯವನ್ನು ಹಗುರವಾಗಿ ಪರಿಗಣಿಸದೆ ನಾವು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಎಚ್ಚರಿಸಿದರು.
ಜಿಲ್ಲೆಯ 1 ಲಕ್ಷ ಯುವಕರ ಜೊತೆ ಕೆಲಸ ಮಾಡುವ ಗುರಿ ಹೊಂದಿದ್ದೇವೆ. ಕೋಲಾರ ಜಿಲ್ಲೆ ಆಂದೋಲನದ ಬೀಡು, ಇಲ್ಲಿಂದ ಪ್ರಾರಂಭವಾದ ಯಾವುದೇ ಕೆಲಸ ಕಾರ್ಯಗಳು ಆಂದೋಲನಗಳು ಯಶಸ್ವಿಯಾಗಿ ನಡೆದಿರುವ ಅನೇಕ ಉದಾಹರಣೆಗಳಿವೆ ಈ ಹಿನ್ನಲೆಯಲ್ಲಿ ದೇಶ ಉಳಿಯಬೇಕಾದರೆ 500 ಕೋಟಿ ಸಸಗಳನ್ನು ನೆಟ್ಟು ಕಾಪಾಡುವ ಜವಾಬ್ದಾರಿ ನಮ್ಮದಾದಾಗ ಮಾತ್ರ ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆ ಸಾಧ್ಯವಾಗಬಹುದು ಎಂದರು.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಅನೇಕರು 62 ಪಸೆರ್ಂಟ್ ಇರುವ ಯುವಕರಿಗೆ ಸಾಮಾಜಿಕ ನ್ಯಾಯ ಒದಗಿಸುತಿಲ್ಲ. 38 ಪಸೆರ್ಂಟ್ ಇರುವ ಹಿರಿಯರು ಅಧಿಕಾರ ಮಾಡುತ್ತಿದ್ದಾರೆ ಇನ್ನು ಸಾಮಾಜಿಕ ನ್ಯಾಯ ಸಾಧ್ಯವೇ ಎಂದು ಪ್ರಶ್ನಿಸಿದರು.ಇಂದಿನ ಹವಾಮಾನ ಏರುಪೇರಿಗೆ ಬದಲಾಗುತ್ತಿರುವ ಕೃಷಿ ಪದ್ಧತಿ ಒಂದು ಕಾರಣವಾದರೆ ಮರಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು ಭೂಮಿಗೆ ಸೇರುತ್ತಿರುವುದು, ಪ್ರತಿದಿನ ನಾವು ಬೆಳಗ್ಗಿನಿಂದ ಮಲಗುವವರೆಗೂ ಮಾಡುವ ಕೆಲಸಗಳಲ್ಲಿ ಯಾವ ಕೆಲಸದಿಂದ ಪರಿಸರ ಬದಲಾವಣೆಗೆ ಕಾರಣವಾಗುತ್ತಿದೆ ಎಂಬುವುದನ್ನು ಯೋಚಿಸಿದರೆ ನಾವು ಹವಾಮಾನ ಬದಲಾವಣೆಯಲ್ಲಿ ನಮ್ಮ ಪಾತ್ರ ಬಹಳ ಮುಖ್ಯವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸುಬ್ರಮಣಿ ಹೆಚ್.ವಿ ಮಾತನಾಡಿ, ನಮಗೆ ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಪರಿಸರ ಎನ್ನುತ್ತೇವೆ. ಪರಿಸರ ಉಳಿದರೆ ಮಾತ್ರ ನಮ್ಮ ಉಳಿವು ಸಾಧ್ಯ ಇಲ್ಲವಾದಲ್ಲಿ ನಮ್ಮನ್ನೂ ಸೇರಿದಂತೆ ನಮ್ಮ ಮುಂದಿನ ಭವಿಷ್ಯದ ಪೀಳಿಗೆಗೆ ಏನೂ ಉಳಿಯಲಾರದು ಎಂದರು.
ವಿಶ್ವಸಂಸ್ಥೆಯು ಮನುಷ್ಯನಿಂದ ಪರಿಸರದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತಡೆಯಲು 1972 ರಲ್ಲಿ ನೈಸರ್ಗಿಕ ಸಂಪನ್ಮೂಗಳನ್ನು ಉಳಿಸಲು ಪರಿಸರ ಸಂರಕ್ಷಣೆಗೆ ಕಾನೂನು ಜಾರಿಗೆ ತರಲಾಯಿತು ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಯಂಗ್ ಇಂಡಿಯಾ ಡೆವಲಪ್ಮೆಂಟ್ ಸಂಸ್ಥೆಯ ಅಧ್ಯಕ್ಷ ಹೂಹಳ್ಳಿ ನಾಗರಾಜ್, ದೀಪಾ, ಶ್ಯಾಮಲಾ, ಗ್ರೀನ್ ವಾರಿಯರ್ಸ್ ಮುಖ್ಯಸ್ಥರಾದ ಕೀರ್ತಿ, ನಂದಿನಿ, ಗುಣಶ್ರೀ, ಕಾವ್ಯ, ಅನುಷ, ಚೈತ್ರ, ಕೆ.ಜಿ.ಎಫ್ ಹರೀಶ್, ಸೋಮು, ದೇವು ಉಪಸ್ಥಿತರಿದ್ದರು.