ದಾವಣಗೆರೆ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ನ್ಯಾಯ ಒದಗಿಸುವ ದೃಷ್ಠಿಯಿಂದ ಜಿಲ್ಲೆಯಲ್ಲಿ ೯೦೦ ಕ್ಕೂ ಹೆಚ್ಚು ಕಾನೂನು ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶರು ಹಾಗೂ ದಾವಣಗೆರೆ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ರÀವಿ ವಿ.ಹೊಸಮನಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ನ ಎಸ್.ಎಸ್.ಮಲ್ಲಿಕಾರ್ಜುನ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾನೂನು ಸಲಹಾ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಿ ನ್ಯಾಯ, ಹಕ್ಕುಗಳು ಮತ್ತು ಸರ್ಕಾರದ ಜನ ಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ ಅರ್ಹರಿಗೆ ತಲುಪುವಂತೆ ಮಾಡಲು ಗ್ರಾಮ ಮಟ್ಟದಿಂದ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾನೂನು ಜಾಗೃತಿಗಾಗಿ ಜಿಲ್ಲೆಯಲ್ಲಿ ಕಾನೂನು ಸಲಹಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಎಲ್ಲರೂ ಒಂದೇ ಸಮನಾಗಿಲ್ಲವಾದ್ದರಿಂದ ಸಂವಿಧಾನ ಪೀಠಿಕೆಯನ್ವಯ ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಅಂಗವಿಕಲರು, ಮಹಿಳೆಯರು, ತೃತೀಯ ಲಿಂಗಿಗಳಿಗೂ ಸಮಾನ ನ್ಯಾಯ, ಸರ್ಕಾರದ ಯೋಜನೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಇಂದಿಗೂ ಕೆಲವರಿಗೆ ಸಮರ್ಪಕವಾಗಿ ಕಾನೂನಾತ್ಮಕ ನ್ಯಾಯ ಲಭಿಸುತ್ತಿಲ್ಲ, ಇಂತಹವರಿಗೆ ಪಾರದರ್ಶಕವಾಗಿ ಸ್ಥಳೀಯ ಮಟ್ಟದಲ್ಲಿ ನ್ಯಾಯ ದೊರಕಿಸಿಕೊಡುವ ಹಿತದೃಷ್ಠಿಯಿಂದ ಸಲಹಾ ಕೇಂದ್ರಗಳನ್ನು ಸ್ಥಾಪಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಕೊಳ್ಳುವಂತೆ ತಿಳಿಸಿದರು.
ಸಂವಿಧಾನದ ಉದ್ದೇಶ, ಮೂಲಭೂತ ಹಕ್ಕುಗಳು ಎಲ್ಲರಿಗೂ ಸಲ್ಲಬೇಕು, ತನ್ನ ಹಕ್ಕುಗಳನ್ನು ಪ್ರತಿಪಾದನೆ ಮಾಡಿ ಪಡೆದುಕೊಳ್ಳಲು ಪ್ರತಿಯೊಬ್ಬ ನಾಗರಿಕನು ಕಾನೂನನ್ನು ಅರಿತವನಾಗಿರಬೇಕು. ಆಗ ಮಾತ್ರ ತನ್ನ ಹಕ್ಕುಗಳ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ. ಸರ್ಕಾರ ಕಾನೂನುಗಳನ್ನು ರಚನೆ ಮಾಡಿದೆ, ಆ ಕಾನೂನುಗಳು ಎಲ್ಲಾ ಜನರಿಗೂ ತಲುಪುತ್ತಿಲ್ಲವೆಂಬುದನ್ನು ಮನಗಂಡು ಏನು ಅರಿಯದ ಜನರಿಗೆ ಕಾನೂನಿನ ಅರಿವು ಮೂಡಿಸಲು ಈ ಕೇಂದ್ರಗಳಿAದ ಸಹಕಾರಿಯಾಗಲಿದೆ ಎಂದರು.
ಭಾರತ ಸಂವಿಧಾನದ ಪೀಠಿಕೆ ಅದ್ಬುತವಾಗಿದೆ, ಯಾಕೆಂದರೆ ಅದರಲ್ಲಿ ಅಡಗಿರುವ ಉದ್ದೇಶ ಕಾರಣವಾಗಿದೆ. ಯಾವುದೇ ಒಂದು ಯೋಜನೆಯನ್ನು ಜಾರಿಗೊಳಿಸುವ ಮೊದಲು ಎಲ್ಲರನ್ನು ಒಟ್ಟುಗೂಡಿಸಿಕೊಂಡು ಆ ಯೋಜನೆಯನ್ನು ಜಾರಿಗೊಳಿಸಬೇಕು. ಆದರೆ ಒಬ್ಬ ವ್ಯಕ್ತಿಗೆ ಎರಡು ಬಾರಿ ಆ ಯೋಜನೆ ತಲುಪಬಾರದು, ತಲುಪಿದರೆ ಆ ಯೋಜನೆ ವಿಫಲವಾದಂತೆ ಎಂದರು.
ಜನರಿಗೆ ಇರುವ ಸಮಸ್ಯೆಗಳ ಬಗ್ಗೆ ಅಥವಾ ಯಾವ ವಿಷಯದ ಬಗ್ಗೆ ಕಾನೂನು ಸಲಹೆ ಅಗತ್ಯವಿರುತ್ತದೆ ಅಂತಹವರು ಉಚಿತ ಸಹಾಯವಾಣಿ ಸಂಖ್ಯೆಗೆ ೧೫೧೦೦ ಗೆ ಕರೆಮಾಡಿ ಮಾಹಿತಿ ಮತ್ತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಜಿಲ್ಲಾಧಿಕಾರಿ ಜಿ,ಎಂ.ಗAಗಾಧರಸ್ವಾಮಿ ಮಾತನಾಡಿ, ಜಿಲ್ಲೆಯಾದ್ಯಂತ ಈವರೆಗೂ ಪೋಕ್ಸೋ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ, ಮಹಿಳಾ ರಕ್ಷಣೆ, ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು, ರಸ್ತೆ ಸುರಕ್ಷತೆ ಸೇರಿದಂತೆ ಹಲವಾರು ಜಾಗೃತಿ ಕಾರ್ಯಗಾರ ಆಯೋಜಿಸಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಲ್ಲಿ ಸಾಕಷ್ಟು ಅರಿವು ಮೂಡಿಸಲಾಗಿದೆ. ರಸ್ತೆ ಸುರಕ್ಷತೆ ಕಾರ್ಯಗಾರದಿಂದ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೩೦ರಷ್ಟು ಅಪಘಾತ ಪ್ರಕರಣ ಇಳಿಕೆಯಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪ್ರಾರಂಭಿಸಿರುವ ಕಾನೂನು ಸಲಹಾ ಕೇಂದ್ರಗಳಿAದ ಅತ್ಯುತ್ತಮ ಕಾರ್ಯವಾಗಲಿದೆ. ಇದರಿಂದ ಜಿಲ್ಲೆಯಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸ್ಥಳೀಯ ಮಟ್ಟದಲ್ಲಿಯೇ ತನ್ನ ಹಕ್ಕು ಮತ್ತು ನ್ಯಾಯ ಪಡೆಯಲು ಸಹಕಾರಿಯಾಗಿದೆ. ಅದರಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ತಂಡೋಪ ತಂಡವಾಗಿ ಕಾರ್ಯನಿರ್ವಹಿಸಿ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತೇವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ಶಿಕ್ಷಣ ಜ್ಞಾನವಿದ್ದರಷ್ಟೇ ಸಾಲದು. ಶಿಕ್ಷಣದ ಜೊತೆಗೆ ಕಾನೂನಿನ ಅರಿವು ಇರಬೇಕು. ಮಹಿಳಾ ಮತ್ತು ಮಕ್ಕಳ ದೌರ್ಜನ್ಯಕ್ಕೆ ಒಳಗಾದಾಗ ಪ್ರತಿಯೊಬ್ಬರು ನಮ್ಮ ಹಕ್ಕುಗಳ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಸೈಬರ್ ಕ್ರೆöÊಂ ಹೆಚ್ಚಾಗುತ್ತಿವೆ. ಅದರಲ್ಲೂ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ವಿದ್ಯಾವಂತರೇ ಡಿಜಿಟಲ್ ಅರೆಸ್ಟ್ ಗೆ ಒಳಗಾಗುತ್ತಿದ್ದಾರೆ. ಇಲಾಖೆ ವತಿಯಿಂದ ಯಾವುದೇ ಕಾರ್ಯಕ್ರಮ, ಕಾರ್ಯಗಾರ ಆಯೋಜನೆ ಮಾಡಿದರೂ ಸಹ ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ತಮ್ಮಗಳ ಸಹಕಾರ ಮುಖ್ಯ. ಆಗಾಗಿ ಜಿಲ್ಲೆಯಲ್ಲಿ ಇಂತಹ ಕಾರ್ಯಗಾರ ಅಗತ್ಯ ಎಂದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ವೇಲಾ ಡಿ.ಕೆ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ವಂದಿಸಿದರು. ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಗಿತ್ತೆ ಮಾಧವ ವಿಠಲ ರಾವ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಗುರುಬಸವರಾಜ್, ವಿವಿಧ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ವಕೀಲರು ಉಪಸ್ಥಿತರಿದ್ದರು.