ಬೆಂಗಳೂರು: ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಪಕ್ಷದ ಟಿಕೆಟ್ ತಮ್ಮ ಪುತ್ರನಿಗೆ ದೊರೆಯಲಿಲ್ಲ ಎಂದು ಅಸಮಾಧಾನಗೊಂಡಿರುವ ಪಕ್ಷದ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸುವ ಹಿನ್ನೆಲೆಯಲ್ಲಿ ಅವರ ಮನವೊಲಿಸಿ ನಿರ್ಧಾರವನ್ನು ಬಿಡಲು ಬಿಜೆಪಿಯ ರಾಜ್ಯ ಪ್ರಮುಖರು ಪ್ರಯತ್ನ ನಡೆಸುತ್ತಿದ್ದಾರೆ.
ನಿನ್ನೆ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಈಶ್ವರಪ್ಪ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೆ ಗೊಂದಲಕ್ಕೀಡಾಗಿರುವ ಪಕ್ಷದ ರಾಜ್ಯ ನಾಯಕರು ಈಶ್ವರಪ್ಪ ಅವರನ್ನು ಮನವೊಲಿಸುವ ಯತ್ನಕ್ಕೆ ಮುಂದಾಗಿದ್ದಾರೆ.ಸೋಮವಾರ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಂದು ನಡೆಯುವ ಸಭೆಗೆ ಈಶ್ವರಪ್ಪ ಗೈರು ಆದರೆ ಪಕ್ಷಕ್ಕೆ ಮುಜುಗರ ಉಂಟಾಗಬಹುದು ಎಂಬ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರನ್ನು ಮನವೊಲಿಸಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಲು ನಾಯಕರು ಯತ್ನ ನಡೆಸುತ್ತಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವ ಅರಗಜ್ಞಾನೇಂದ್ರ, ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೋಟಾ ಶ್ರೀನಿವಾಸ್ ಪೂಜಾರಿ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಯಾವುದೇ ಕಾರಣಕ್ಕೂ ಈಶ್ವರಪ್ಪ ಪಕ್ಷದ ನಿರ್ಧಾರವನ್ನು ತಳ್ಳಿ ಹಾಕುವುದಿಲ್ಲ. ಅವರು ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ