ದೊಡ್ಡಬಳ್ಳಾಪುರ : ಡೆಬೊರಾ ಫೌಂಡೇಶನ್ ಇಂಡಿಯಾ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸೌಭಾಗ್ಯ ಸಂಸ್ಥೆಯ ಅಧ್ಯಕ್ಷರಾದ ರಾಜಗೋಪಾಲ್ ಅವರು ಹೇಳಿದರು.
ಡೆಬೋರಾ ಫೌಂಡೇಶನ್ ವತಿಯಿಂದ ತಾಲ್ಲೂಕಿನ ಟಿಪ್ಪು ನಗರದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಆರಂಭಿಸಿದ ಉಚಿತ ಹೊಲಿಗೆ ಯಂತ್ರ ತರಬೇತಿಯನ್ನು ಉದ್ಘಾಟಿಸಿ ಅವರುಮಾತನಾಡಿದರು. ತಾಲೂಕಿನ 14 ಹಳ್ಳಿಗಳ ಸುಮಾರು 500 ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆ ಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಇಲ್ಲಿಯವರೆಗೆ ಡೆಬೊರಾ ಫೌಂಡೇಶನ್ ಸುಮಾರು 200 ಮಹಿಳೆಯರಿಗೆ ಟೈಲರಿಂಗ್ ಕೋರ್ಸ್ನಲ್ಲಿ ತರಬೇತಿ ನೀಡಿದೆ.
ತರಬೇತಿಯ ನಂತರ ಮಹಿಳೆಯರಿಗೆ ತಮ್ಮ ಸ್ವಂಯಂ ಉದ್ಯೋಗ ಆರಂಭಿಸಿ ಸಶಕ್ತರಾಗಲು ಜೀವನ ಕೌಶಲ್ಯಗಳ ಬಗ್ಗೆ ತರಬೇತಿ ನೀಡುತ್ತಿದೆ. ಇದರ
ಭಾಗವಾಗಿ ಟಿಪ್ಪು ನಗರದಲ್ಲಿ ಮಹಿಳೆಯರಿಗಾಗಿ ಹೊಸ ಟೈಲರಿಂಗ್ ತರಬೇತಿ ಕೇಂದ್ರವನ್ನು ಪ್ರಾರಂಭಿಸಿರುವುದು ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ ಎಂದರು.ಈ ಕೇಂದ್ರದಲ್ಲಿ ಸುಮಾರು 12 ಮಹಿಳೆಯರಿಗೆ ಆರು ತಿಂಗಳ ಕಾಲ ಉಚಿತ ತರಬೇತಿ ಕೊಟ್ಟು ಪ್ರಮಾಣ ಪತ್ರ ನೀಡಲಾಗುವುದು ಎಂದರು.