ಚೆನ್ನೈ: ಇತ್ತೀಚೆಗೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ನ ಐಪಿಎಲ್ ಪಂದ್ಯ ವೀಕ್ಷಿಸಲು, ಧೋನಿ ಅಭಿಮಾನಿಯೊಬ್ಬರು 64 ಸಾವಿರ ರೂ. ನೀಡಿ ಟಿಕೆಟ್ ಖರೀದಿಸಿದ್ದಾರೆ. ಇನ್ನೂ ಮಕ್ಕಳ ಶಾಲಾ ಶುಲ್ಕ ಕಟ್ಟದಿದ್ದರೂ, ಬ್ಲ್ಯಾಕ್ನಲ್ಲಿ ಟಿಕೆಟ್ ಖರೀದಿಸಿದ್ದಾರೆ. ಪಂದ್ಯ ನೋಡಿ ತನಗೂ, ತನ್ನ ಮೂರು ಮಕ್ಕಳಿಗೂ ಬಹಳ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಧೋನಿ ಕ್ರಿಕೆಟ್ ಆಡುವುದನ್ನು ನೇರವಾಗಿ ಒಮ್ಮೆಯಾದರೂ ನೋಡಬೇಕು ಎಂಬ ಕಾರಣಕ್ಕೆ ಈ ವ್ಯಕ್ತಿ 64 ಸಾವಿರ ರೂ. ನೀಡಿ ಟಿಕೆಟ್ ಖರೀದಿಸಿದ್ದಾರೆ. ಈ ಪಂದ್ಯಕ್ಕೆ ತಮ್ಮ ಮೂವರು ಮಕ್ಕಳನ್ನು ಸಹ ಕರೆದುಕೊಂಡು ಹೋಗಿದ್ದಾರೆ. ಪಂದ್ಯದ ಬಳಿಕ ಮಾಧ್ಯಮವೊಂದರ ಜತೆ ಮಾತನಾಡಿದ ಅವರು, ನನಗೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಬ್ಲಾಕ್ನಲ್ಲಿ 64 ಸಾವಿರ ರೂ. ನೀಡಿ ಟಿಕೆಟ್ ಖರೀದಿಸಿದೆ.
ನಾನು ಇನ್ನೂ ಸಹ ನನ್ನ ಮಕ್ಕಳ ಶಾಲಾ ಶುಲ್ಕ ಪಾವತಿ ಮಾಡಬೇಕಿದೆ ಎಂದಿದ್ದಾರೆ.ಈತನ ಅಭಿಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದರೂ ಸಹ ಬಹುತೇಕ ಮಂದಿ ಟೀಕಿಸಿದ್ದಾರೆ. ಈ ಸುದ್ದಿಯನ್ನು ವೈಭವೀಕರಣ ಮಾಡಬೇಡಿ, ಇದು ಮುಟ್ಠಾಳತನದ ಪರಮಾವಧಿ ಎಂದು ನೆಟ್ಟಿಗರು ಹೇಳಿದ್ದಾರೆ.