ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹೊಸ ವರುಷವು ಹೊಸ ಹರುಷವು ಹೊಸದು ಹೊಸತು ತರುತಿದೆ..ಎಂಬ ಗೀತೆಯ ತಾತ್ಪರ್ಯದಂತೆ ಯುಗಾದಿ ಎಂದರೆ ಹೊಸ ವರುಷ, ಹೊಸದನ್ನು ತರುವ, ಸಂತೋಷವನ್ನು ತರುವ ಹಬ್ಬವೇ ಯುಗಾದಿ.
ವೆಸ್ಟರ್ನ್ ಕ್ಯಾಲೆಂಡರ್ ಪ್ರಕಾರ ಜನವರಿ ೧ ಹೊಸ ವರ್ಷ, ಆದರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಸಮಸ್ತ ಹಿಂದುಗಳಿಗೆ ಯುಗಾದಿಯೇ ಹೊಸ ವರ್ಷ. ಈ ದಿನ ಚೈತ್ರ ಮಾಸದ ಶುಕ್ಲ ಪಾಡ್ಯವಾಗಿರುತ್ತದೆ.
ಪ್ರಪಂಚದ ಎಲ್ಲಾ ಸಂಸ್ಕೃತಿಗಳಲ್ಲಿ ಎಲ್ಲಾ ಧರ್ಮಗಳ ಅನುಯಾಯಿಗಳಲ್ಲಿ ಹೊಸ ವರುಷದ ಆಗಮನ ಹರ್ಷೋತ್ಕರ್ಷದಿಂದ ಆಚರಿಸುವ ದೊಡ್ಡ ಹಬ್ಬವೇ… ಹಿಂದುಗಳಲ್ಲಿ ಬಹುಜನ ಚೈತ್ರ ಮಾಸದ ಮಾರ್ಚ್ ಏಪ್ರಿಲ್ ಶುಕ್ಲ ಪಕ್ಷದ ಪ್ರಥಮ ದಿನವನ್ನು, ಚಂದ್ರಮಾನ ಯುಗಾದಿ ಎಂದು ಆಚರಿಸುತ್ತಾರೆ.
ಪಾಲ್ಗುಣ ಫೆಬ್ರವರಿ ಮಾರ್ಚ್ ಈ ತಿಂಗಳುಗಳ ಅಮಾವಾಸ್ಯೆಯಿಂದ ಕೊನೆಯಾಗುವುದೆಂದು ಪರಿಗಣಿಸುವ ವಾಡಿಕೆ ತುಂಬಾ ಹೆಚ್ಚಾಗಿದೆ.
ಸೃಷ್ಟಿಕರ್ತನಾದ ಬ್ರಹ್ಮನು ಆ ದಿನದ ಸೂರ್ಯೋದಯದ ಸಮಯದಲ್ಲಿ ಈ ಪ್ರಪಂಚವನ್ನು ಸೃಷ್ಟಿಸಿದನೆಂದೂ.. ಆದ್ದರಿಂದ ಅದು ಯುಗದ ಆದಿ ಯುಗಾದಿ. ಒಂದು ಶಕದ ಆದಿ ಎನಿಸಿಕೊಂಡಿತೆAದು ಪೌರಾಣಿಕ ಕಥೆಯಿಂದ ತಿಳಿದು ಬರುತ್ತದೆ.
ಶಾಲಿವಾಹನನು ಕ್ರಿಸ್ತಶಕ ೨೯ರ ಸುಮಾರು ಆ ದಿನ ಚಕ್ರವರ್ತಿಯಾಗಿ ಅಭಿಷಕ್ತನಾದನೆಂಬುದು ಚರಿತ್ರೆ. ಆದ್ದರಿಂದ ಈ ಚರಿತ್ರಕಾಲ ಶಾಲಿವಾಹನ ಶಕ ಆಯಿತು ಎಂದು ಹೇಳಲಾಗಿದೆ.
ಯುಗಾದಿಯ ವಿಶೇಷತೆ ಏನು?
ಹೊಸ ವರ್ಷದ ಸ್ವರೂಪ ಮಳೆ ಬೆಳೆ, ಜನಾರೋಗ್ಯ ನಡೆಯಬಹುದಾದ ಮುಖ್ಯ ಘಟನೆಗಳು ಆಯಾ ರಾಶಿಗಳಿಗೆ ಉಂಟಾಗಬಹುದಾದ ಒಳಿತು ಕೆಡುಕುಗಳ ಉಪಶಮನಕ್ಕೆ ಅಗತ್ಯವಾದ ಗ್ರಹ ಶಾಂತಿ ಮುಂತಾದ ಅಲೌಕಿಕ ಉಪಾಯಗಳು, ಇವುಗಳ ಪೂರ್ವಭಾವಿ ಪರಿಚಯಕ್ಕಾಗಿ ಜ್ಯೋತಿಷ್ಯರ ಸಹಾಯದಿಂದ ಪಂಚಾAಗ ಶ್ರವಣ.. ಜಾರಿಗೆ ಬಂತು.
ವಸAತ ಋತುವಿನಲ್ಲಿ ಉಂಟಾಗಬಹುದಾದ ರೋಗರುಜಿನಗಳ ನಿಗ್ರಹ ಹಾಗೂ ಆರೋಗ್ಯ ವರ್ಧನೆಗಾಗಿ ಬೇವು ಬೆಲ್ಲದ ಸೇವನೆ ಹೊಸ ವರ್ಷದಲ್ಲಿ ಪ್ರತೀ ವ್ಯಕ್ತಿಯು ಅನುಭವಿಸಬೇಕಾದ ಸುಖ ದುಃಖ, ಲಾಭ ನಷ್ಟ, ಜಯ ಅಪಜಯ ಮುಂತಾದ ಸಿಹಿ ಕಹಿ ಅನುಭವಗಳನ್ನು ಸಮದೃಷ್ಟಿಯಿಂದ ಕಾಣಬೇಕೆಂಬ ವಿವೇಕದ ಪ್ರಚೋದನೆಯ ಸಂಕೇತವಾಗಿ ಬೇವು ಬೆಲ್ಲ ಸೇವನೆ ಅತೀ ಮುಖ್ಯ ಎಂದು ಸ್ವಾಮಿ ಹರ್ಷಾನಂದ ವಿರಚಿತ ಹಿಂದೂ ಹಬ್ಬಗಳು ಮತ್ತು ಉತ್ಸವಗಳು ಎಂಬ ಪುಸ್ತಕದಲ್ಲಿ ಈ ವಿಚಾರಗಳು ದಾಖಲಾಗಿವೆ.
ಯುಗಾದಿ ಎಂದರೆ ಏನು.?
ಇದು ದಕ್ಷಿಣ ಭಾರತದ ಪ್ರಮುಖ ಹಬ್ಬವಾಗಿದ್ದು, ಆಂಧ್ರ, ತೆಲಂಗಾಣ ಕರ್ನಾಟಕ ರಾಜ್ಯಗಳ ಹಬ್ಬ ಯುಗಾದಿಯಾಗಿದ್ದು, ಇದು ಬೇವುಬೆಲ್ಲ ಅರ್ಥಾತ್ ಕಷ್ಟ ಸುಖಗಳ ಮಿಶ್ರಿತವಾದ ಸಮಷ್ಟಿ ಭಾವದ ಆಚರಣೆ ಎಂದು ಹೇಳಬಹುದಾಗಿದೆ.
ವಿವಿಧೆೆಡೆ ಯುಗಾದಿಯ ಆಚರಣೆ ಹೇಗೆ?:
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರಗಳಲ್ಲಿ ಯುಗಾದಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲಾಗುತ್ತದೆ.
ಮಹಾರಾಷ್ಟ್ರದಲ್ಲಿ ಯುಗಾದಿ:
ಯುಗಾದಿ ಹಬ್ಬದ ಬೆಳಗ್ಗಿನ ದಿನ ಉದ್ದನೆಯ ಬಿದಿರು ಬೊಂಬನ್ನು ರೇಷ್ಮೆ ವಸ್ತ್ರದಿಂದ ಅಲಂಕರಿಸಿ, ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ ಪಾತ್ರೆಯನಿಟ್ಟು, ಮಿಠಾಯಿಗಳ ಮತ್ತು ಬೇವಿನೆಲೆಗಳ ಮಾಲೆಯನ್ನು ಅದರ ಕಂಠಕ್ಕೆ ಏರಿಸಿ ಅದನ್ನು ಗುಡಿ ಎಂದು ಪೂಜಿಸಿ ಮನೆಯ ಮಾಳಿಗೆಯ ಮೇಲೆ ಇಟ್ಟು, ಸೂರ್ಯಾಸ್ತದ ನಂತರ ಅದನ್ನು ಕೆಳಗಿಳಿಸಿ ಮಿಠಾಯಿ ಮತ್ತು ಬೇವಿನೆಲೆಗಳನ್ನು ಮನೆಯವರೆಲ್ಲ ಪ್ರಸಾದವಾಗಿ ಸೇವಿಸುವ ಮೂಲಕ ಯುಗಾದಿಯ ಪಡ್ವ ಅಥವಾ ಗುಡಿ ಪಡ್ವ ಎಂದು ಹೇಳುವ ಪದ್ಧತಿ ಚಾಲ್ತಿಯಲ್ಲಿದೆ.
ಕರ್ನಾಟಕದಲ್ಲಿ: ಮೂರು ನಾಲ್ಕು ದಿನಗಳ ಮುಂಚೆಯೇ ಮನೆಯನ್ನು ಸ್ವಚ್ಛಗೊಳಿಸಿ, ಮನೆಯ ಮುಂದೆ ರಂಗೋಲಿ ಬಿಟ್ಟು, ಬಾಗಿಲುಗಳಿಗೆ ಮಾವಿನ ತೋರಣಗಳಿಂದ ಸಿಂಗರಿಸಿ, ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ದೇವರನ್ನು ಪೂಜಿಸಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ, ಒಬ್ಬಟ್ಟಿನ ಸಿಹಿ ಖಾದ್ಯಗಳನ್ನು ದೇವರಿಗೆ ಅರ್ಪಣೆ ಮಾಡುವುದು.
ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪುನೀತರಾಗುವುದು.. ಈ ಪದ್ಧತಿ ನಗರ ಪ್ರದೇಶಗಳಲ್ಲಿ ಇಂದೂ ಕೂಡ ಚಾಲ್ತಿಯಲ್ಲಿದ್ದು, ಹಬ್ಬವನ್ನು ಶ್ರದ್ಧೆ ಭಕ್ತಿಗಳಿಂದ ಮಾಡಲಾಗುತ್ತದೆ.
ಪ್ರಮುಖವಾಗಿ ಹಳ್ಳಿಗಳಲ್ಲಿ ಯುಗಾದಿ:
ಮಾವಿನ ಎಲೆಗಳಿಂದ ತಯಾರಿಸಿದ ತೋರಣವನ್ನು ಮನೆಯ ಬಾಗಿಲುಗಳಿಗೆ ಕಟ್ಟುವುದು. ಒಂದು ವಾರ ಮುಂಚಿತವಾಗಿ ಮನೆಯನ್ನ ಸ್ವಚ್ಛಗೊಳಿಸಿಕೊಂಡು, ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಮುತ್ತುಗದ ಎಲೆಗಳಲ್ಲಿ ಒಬ್ಬಟ್ಟನ್ನು ದೇವರ ಮುಂದೆ ನೈವೇದ್ಯವಾಗಿ ಇಡುವುದು, ಮತ್ತು ಮುತ್ತುಗದ ಎಲೆಗಳಿಂದ ತಯಾರಿಸಿದ ಜೊನ್ನೆಗಳಲ್ಲಿ ಒಬ್ಬಟ್ಟಿನ ಜೊತೆ ತರಕಾರಿ ಗೊಜ್ಜನ್ನು ನೈವೇದ್ಯವಾಗಿ ಅರ್ಪಿಸುವುದು.
ಪೂಜೆ ಪುನಸ್ಕಾರ ದ ನಂತರ ಮನೆಯವರೆಲ್ಲ ಒಟ್ಟಿಗೆ ಸೇರಿ “ ಶತಾಯು ವಜ್ರ ದೇಹಾಯ ಸರ್ವ ಸಂಪತ್ಕ ರಾಯಚ/ ಸರ್ವಾರಿಷ್ಟ ವಿನಾಶಾಯ ನಿಂಬಕAದಳ ಭಕ್ಷಣಂ/ ಎಂಬ ಮಂತ್ರ ಹೇಳುವ ಮೂಲಕ ಬೇವು ಬೆಲ್ಲವನ್ನ ಭಕ್ತಿಯಿಂದ ಸೇವಿಸುವುದು.
ಜೊತೆಯಲ್ಲಿಯೇ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಡಿದಂತಹ ಮನೆಯ ಕುಟುಂಬದ ಸದಸ್ಯರಿಗೆ ಸ್ಮಶಾಣದ ಬಳಿ ಅಥವಾ ದಿವೆಯ ಬಳಿಗೆ ಹೋಗಿ ಒಬ್ಬಟ್ಟಿನ ಪ್ರಸಾದ, ಗೊಜ್ಜು ಹಾಗೂ ಅವರಿಗೆ ತುಂಬಾ ಇಷ್ಟದ ತಿಂಡಿಗಳನ್ನು ಇಟ್ಟು ಪೂಜಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರುವ ಪದ್ಧತಿ ಈಗಲೂ ಕೂಡ ಹಳ್ಳಿಗಳಲ್ಲಿ ಚಾಲ್ತಿಯಲ್ಲಿ ಬಂದಿದೆ.
ಪೂಜೆ ಪುನಸ್ಕಾರಗಳನ್ನು ಹೊರತುಪಡಿಸಿ:
ಮನೆಯ ಹತ್ತಿರದ ಚಿಗುರಿದ ಮರಗಳಿಗೆ ಹಗ್ಗದಿಂದ ಜೋಗಾಲಿಯನ್ನು ಕಟ್ಟಿ ಆಡುವುದು.. ಈ ಮೂಲಕ ಮನಸ್ಸಿಗೆ ಮುದಾ ತಂದುಕೊಳ್ಳುವುದು.
ಹೆಚ್ಚಾಗಿ ಯುವಕರು ಇಸ್ಮಿಟ್ ಕಾರ್ಡ್ಗಳನ್ನು ದುಡ್ಡು ಕಟ್ಟುವ ಮೂಲಕ ಆಟ ಆಡುವ ಒಂದು ರೂಡಿ ಗತ ಪದ್ಧತಿಯನ್ನು, ಈಗಲೂ ಸಹ ಮುಂದುವರಿಸಿಕೊAಡು ಹೋಗುತ್ತಿದ್ದು, ಆದರೆ ಕಾನೂನಿನ ಬಿಗಿ ಹಾಗೂ ಪೊಲೀಸರ ಭಯದಿಂದ ಕಣ್ಣ ಮುಚ್ಚಾಲೆಯಂತೆ ಈಗೀಗ ಹಾಡುವುದನ್ನ ಕಡಿಮೆಗೊಳಿಸಲಾಗುತ್ತಿದೆ.
ಯುಗಾದಿಯ ಮಾರನೇ ದಿನ: ಯುಗಾದಿಯ ಮಾರನೇ ದಿನ ವರ್ಷದೊಡಕು ಈ ದಿನದಂದು ಮಾಂಸಹಾರವನ್ನೇ ಹೆಚ್ಚಾಗಿ ಸೇವಿಸಲಾಗುತ್ತದೆ, ಅಭ್ಯಾಸವಿರುವವರು ಡ್ರಿಂಕ್ಸ್ ಅನ್ನು ಮಾಡಿ, ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಂಡು ಮುದ ಪಡೆಯುತ್ತಾರೆ ಎಂಬುದು ವಿಶೇಶಾರ್ಹ.
ಯುಗಾದಿಯ ದಿನದ ಸಂಜೆ ಸೂರ್ಯಾಸ್ತದ ಸಮಯದಲ್ಲಿ ‘ಚಂದು ‘ಕಾಣಿಸುವುದು. ಅದನ್ನು ಮೊದಲು ನೋಡಿದವರು ದೇವರಿಗೆ ಕೈ ಮುಗಿದು ಹಿರಿಯರಿಗೆ ನಮಸ್ಕರಿಸುವ ಪದ್ಧತಿ. ಆ ಚಂದು ( ಅರ್ಧ ಚಂದ್ರ ) ಮೈಸೂರು ದಿಕ್ಕಿಗೆ ವಾಲಿದರೆ ಅನ್ನ ಹೆಚ್ಚಿಗೆ ಎಂದು ಹೇಳುವ ಪದ್ಧತಿ ಹಾಗೂ ಬೆಂಗಳೂರು ಕಡೆಗೆ ಹೆಚ್ಚಿಗೆ ವಾಲಿದ್ದರೆ ಹಣ ಹೆಚ್ಚು ಎಂದು ಹೇಳುವ ಪದ್ಧತಿ ಈಗಲೂ ಕೂಡ ಜನಪದರಲ್ಲಿ ರೂಢಿಯಲ್ಲಿದೆ.
ಬಹು ಮುಖ್ಯ ಅಂಶ: ಹಿಂದುಗಳು ಯುಗಾದಿ ದಿನದಂದು ಆಕಾಶದಲ್ಲಿ ಅರ್ಧ ಚಂದ್ರನನ್ನು ನೋಡಿ ಸಂತೋಷ ಪಟ್ಟು,ಹಬ್ಬ ಆಚರಿಸಿದರೇ.. ಕಾಕತಾಳಿಯ ಎಂಬAತೆ ಈ ಸಂದರ್ಭದಲ್ಲಿಯೇ ಮುಸ್ಲಿಮರು ಅರ್ಧ ಚಂದ್ರನನ್ನು ನೋಡಿದ ಮೇಲೆಯೇ ರಂಜಾನ್ ಅನ್ನು ಆಚರಿಸುತ್ತಾರೆ ಎಂಬ ನಂಬಿಕೆ ಇಂದಿಗೂ ಪ್ರಸ್ತುತ ಚಾಲ್ತಿಯಲ್ಲಿರುವುದು ಗಮನಾರ್ಹ ಅಂಶವಾಗಿದೆ.
ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಡಾ.ಸತ್ಯಮೂರ್ತಿ ಗೂಗಿ ಸಾಹಿತಿಗಳು, ಬೆಂಗಳೂರು.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹೊಸ ವರುಷವು ಹೊಸ ಹರುಷವು ಹೊಸದು ಹೊಸತು ತರುತಿದೆ..



