ರಾಮನಗರ: ಅಲ್ಲೊಂದು ಜಗತ್ತೇ ತೆರೆದುಕೊಂಡಿತ್ತು. ನಮ್ಮ ನೆಲದ ಚರಿತ್ರೆಯಿಂದಿಡಿದು ವಿಶ್ವದ ಭೂಪಟದಲ್ಲಿರುವ ಎಲ್ಲಾ ದೇಶಗಳ ವಿವಿಧ ಕಾಲಘಟ್ಟಗಳ ಇತಿಹಾಸದ ಕುರುಹುಗಳು ಅಲ್ಲಿದ್ದವು. ಸಭಾಂಗಣದಲ್ಲಿ ಅನಾವರಣಗೊಂಡಿದ್ದ ಜ್ಞಾನಲೋಕವನ್ನು ಮಕ್ಕಳಿಂದಿಡಿದು ವಯಸ್ಕರು ಕುತೂಹಲದಿಂದ ಕಣ್ತುಂಬಿಕೊಂಡರು.
ತಾಲ್ಲೂಕು ಸಾಹಿತ್ಯ ಪರಿಷತ್ ಹಾಗೂ ಸ್ಪಂದನ ಚಾರಿಟೇಬಲ್ ಟ್ರಸ್ಟ್, ನಗರದ ಆರ್.ವಿ.ಸಿ.ಎಸ್ ಕನ್ವೆನ್ಷನ್ ಹಾಲ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೆಂಗಳೂರಿನ ಕೆ. ವಿಶ್ವನಾಥ್ ಅವರ ಸಂಗ್ರಹಿಸಿರುವ 190ಕ್ಕೂ ಹೆಚ್ಚು ದೇಶಗಳ ಹಳೆಯ ನಾಣ್ಯಗಳು, ನೋಟುಗಳು, ಅಂಚೆ ಚೀಟಿಗಳು ಹಾಗೂ ಹಸ್ತಾಕ್ಷರ ಸಂಗ್ರಹದ ಪ್ರದರ್ಶನದಲ್ಲಿ ಕಂಡುಬಂದ ದೃಶ್ಯವಿದು.
ಸ್ವಾತಂತ್ರ್ಯ ಪೂರ್ವದಿಂದಿಡಿದು ಸದ್ಯದ ಕಾಲಘಟ್ಟದವರೆಗಿನ ವಿಶ್ವದ ಬಹುತೇಕ ದೇಶಗಳ ನಾಣ್ಯಗಳು, ನೋಟುಗಳು, ಅಂಚೆ ಚೀಟಿಗಳು, ಕನ್ನಡದ ಮೇರು ಸಾಹಿತಿಗಳು ಮತ್ತು ವಿಶ್ವದ ಖ್ಯಾತನಾಮರ ಹಸ್ತಾಕ್ಷರ ಪ್ರದರ್ಶನಕ್ಕೆ ಭೇಟಿ ನೀಡಿದ್ದವರನ್ನು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ದಿತು.
ಪ್ರದರ್ಶನ ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಗೋವಿಂದರಾಜ ಸಿ.ಕೆ, ಭಾರತ ಮತ್ತು ವಿಶ್ವದ ಪ್ರಾಚೀನ ಪರಂಪರೆಯನ್ನು ವಿದ್ಯಾರ್ಥಿಗಳು ಸುಲಭವಾಗಿ ತಿಳಿದುಕೊಳ್ಳುವುದಕ್ಕೆ ಇಂತಹ ಪ್ರದರ್ಶನಗಳು ಪೂರಕ. ಇಂತಹ ಪ್ರದರ್ಶನಗಳು ಶಾಲಾಕಾಲೇಜುಗಳ ಮಟ್ಟ ದಲ್ಲಿ ಹೆಚ್ಚಾಗಿ ನಡೆಯಬೇಕು ಎಂದು ಸಲಹೆ ನೀಡಿದರು.
ಟ್ರಸ್ಟ್ ಗೌರವಾಧ್ಯಕ್ಷ ಡಾ. ಎಂ. ಬೈರೇಗೌಡ ಮಾತನಾಡಿ, ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ಪ್ರಾಚೀನ ಪರಂಪರೆಯನ್ನು ಅರಿಯಬೇಕು. ಈ ಪ್ರದರ್ಶನವು ಅಂತಹದ್ದೊಂದು ಸದಾವಕಾಶ ಕಲ್ಪಿಸಿದೆ. 2,650 ವರ್ಷಗಳಿಗೂ ಹಳೆಯ ಕಾಲದ ಭಾರತ ಹಾಗೂ ವಿಶ್ವದ 19ಕ್ಕೂ ಹೆಚ್ಚು ದೇಶಗಳ ನಾಣ್ಯಗಳು ಮತ್ತು ನೋಟುಗಳು, ಜಗತ್ತಿನ 1500ಕ್ಕೂ ಹೆಚ್ಚು ಖ್ಯಾತನಾಮರ ಹಸ್ತಾಕ್ಷರಗಳು ನಮಗೆ ಈ ನೆಲದ ಪರಂಪರೆ ಕಟ್ಟಿಕೊಡುತ್ತವೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ದಿನೇಶ್, ಚಿಪ್ಪಿನೊಳಗಿನ ಆಮೆಗಳಂತಿದ್ದ ನಮಗೆ ಈ ಪ್ರದರ್ಶನವು ಜಗತ್ತಿನ ವಿರಾಟ್ ದರ್ಶನ ಮಾಡಿಸಿದೆ. ನಾವು ತಿಳಿದುಕೊಳ್ಳಬೇಕಾದ್ದು ಬಹಳಷ್ಟಿದೆ ಎಂಬ ಭಾವ ಮೂಡಿಸಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ನಾಗೇಶ್, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ. ಶಿವಣ್ಣ, ನೇಗಿಲಯೋಗಿ ಸೇವಾ ಟ್ರಸ್ಟ್ ಅಧ್ಯಕ್ಷ ಪಟೇಲ್ ಸಿ. ರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಚಂದನ್, ಆರ್ವಿಸಿಎಸ್ ಕನ್ವೆನ್ಷನ್ ಹಾಲ್ ಮಾಲೀಕ ಸುರೇಶ್, ಸಮಾಜ ಸೇವಕ ಶ್ರೀಧರ್ ಕ್ಯಾಸಾಪುರ,ಗೌರವ ಕೋಶಾಧ್ಯಕ್ಷ ನಂಜುಂಡಪ್ಪ ಬಿ.ಕೆ, ಟ್ರಸ್ಟ್ ಅಧ್ಯಕ್ಷ ಮುತ್ತಣ್ಣ, ಬಿ.ಟಿ. ರಾಜೇಂದ್ರ ಭಾಗವಹಿಸಿದ್ದರು.