ಬೆಂಗಳೂರು: ಖ್ಯಾತ ಚಿತ್ರಕಲಾವಿದ ಯೂಸುಫ್ ಆರಕ್ಕಲ್ ಚಿತ್ರ ಕಲಾಕೃತಿಗಳು ಹಾಗೂ ಅವರ ಪುತ್ರ ಶಿಬು ಆರಕ್ಕಲ್ ಅವರ ವಿಶೇಷ ಛಾಯಾಚಿತ್ರಗಳ ಸರಣಿಯ ಪ್ರದರ್ಶನವನ್ನು ಸಂದೀಪ್ & ಗೀತಾಂಜಲಿ ಮೈನಿ ಫೌಂಡಶನ್ ಆಯೋಜಿಸಿದೆ.
ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ 7ನೇ ಅಡ್ಡರಸ್ತೆಯಲ್ಲಿರುವ ಫೌಂಡೇಶನ್ ಆವರಣದ ಮೆಜ್ಜಾನೈನ್ ಲೆವೆಲ್ನ 38 ಮೈನಿ ಸದನ್ ನಲ್ಲಿ ಕಲಾಕೃತಿಗಳು ಹಾಗೂ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೂನ್ 5ರಂದು ಆರಂಭಗೊಂಡಿರುವ ಈ ಪ್ರದರ್ಶನ ಜುಲೈ 10, 2024ರವರೆಗೆ ನಡೆಯಲಿದೆ.ಯೂಸುಫ್ ಅರಕ್ಕಲ್ ಮತ್ತು ಅವರ ಮಗ ಶಿಬು ಅವರು ಗಂಗಾ ಸರಣಿಯಲ್ಲಿ ಹಲವಾರು ಅಪರೂಪದ ಚಿತ್ರಕಲೆಗಳು ಹಾಗೂ ಛಾಯಾಚಿತ್ರಗಳ ಸಂಗ್ರಹವನ್ನು ಹೊಂದಿದ್ದಾರೆ.
ಭಾರತದ ಜನಸಮುದಾಯದ ಆಧ್ಯಾತ್ಮಿಕ ಮೂಲವಾಗಿರುವ ಗಂಗಾನದಿಯ ಉದ್ದಕ್ಕೂ ಸಂಚರಿಸಿರುವ ಅವರು ಅಲ್ಲಿನ ತಾತ್ವಿಕ ಅನ್ವೇಷಣೆಗಳು ಮತ್ತು ವೈಯಕ್ತಿಕ ಸತ್ಯಗಳನ್ನು ತಮ್ಮ ಫೋಟೊಗ್ರಫಿಗಳು ಹಾಗೂ ಚಿತ್ರಕಲೆಗಳ ಮೂಲಕ ಸಂಗ್ರಹಿಸಿದ್ದಾರೆ. ತಾವು ಸ್ವತಃ ಗಂಗಾ ನದಿಯ ಕುರಿತು ಅಕರ್ಷಿತರಾಗುವ ಜತೆಗೆ ನದಿಗಾಗಿಯೇ ಜೀವನ ಸಮರ್ಪಿಸಿದವರ ಬದುಕನ್ನೂ ಚಿತ್ರಿಸಿದ್ದಾರೆ. ಪ್ರಮುಖವಾಗಿ ನದಿಯಲ್ಲಿ ದೋಣಿ ಹಾಯಿಸುವ ಮಲ್ಲಾ ಎಂಬ ಅಂಬಿಗರ ಜೀವಕ್ಕೆ ಕಲಾತ್ಮಕ ಸ್ಪರ್ಶ ನೀಡಿದ್ದಾರೆ.ಈ ಚಿತ್ರಗಳು ಹಾಗೂ ಕಲಾಕೃತಿಗಳು ಗಂಗಾ ಸರಣಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಮಲ್ಲಾ ಎಂದು ಕರೆಯಲ್ಪಡುವ ಗಂಗಾನದಿಯ ಅಂಬಿಗರು, ಈ ಕಲಾ ಪ್ರದರ್ಶನದ ನಿರೂಪಣೆಯ ಅವಿಭಾಜ್ಯ ಭಾಗವಾಗಿದ್ದಾರೆ, ಇದನ್ನು ಶಿಬು ಅರಕ್ಕಲ್ ತನ್ನ ಕ್ಯಾಮೆರಾ ಲೆನ್ಸ್ ಮೂಲಕ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ನೂರಾರು ವರ್ಷಗಳಿಂದ ಈ ಸಮುದಾಯವು ತಮ್ಮ ಕಾಯಕವನ್ನು ಪರಂಪರಾಗತವಾಗಿ ವರ್ಗಾಯಿಸಿಕೊಂಡು ಬಂದಿದ್ದಾರೆ.‘ಮಲ್ಲಾ’ ಶೀರ್ಷಿಕೆಯ ಛಾಯಾಚಿತ್ರ ಕಲಾಕೃತಿಗಳ ಸರಣಿಯು ಈ ದೋಣಿಯವರು ಗಂಗಾ ನದಿಯೊಂದಿ ಗೆ ಹೊಂದಿರುವ ನಂಟಿನಿಂದ ಸ್ಫೂರ್ತಿ ಪಡೆದಿದೆ.