ನವದೆಹಲಿ: ಹರ್ಯಾಣದಲ್ಲಿ ೩,೦೦೦ ಕಿಲೋ ಸ್ಫೋಟಕಗಳು ದೊರೆತ ಬೆನ್ನಲ್ಲೇ ಉತ್ತರಾಖಂಡ್ನ ಶಾಲೆಯೊಂದರಲ್ಲೂ ಸ್ಫೋಟಕಗಳು ಪತ್ತೆಯಾಗಿವೆ. ವರದಿಗಳ ಪ್ರಕಾರ, ಉತ್ತರಾಖಂಡ್ನ ಆಲ್ಮೋರಾ ಜಿಲ್ಲೆಯ ದಬರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ೨೦ ಕಿಲೋ ತೂಕದ ೧೬೧ ಗಿಲಾಟಿನ್ ಸ್ಪೋಟಕಗಳು ಕಂಡು ಬಂದಿವೆ. ಶಾಲೆಯ ಪ್ರಾಂಶುಪಾಲ ಸುಭಾಷ್ ಸಿಂಗ್ ಅವರು ಈ ಸ್ಫೋಟಕಗಳನ್ನು ಕಂಡು, ಪೊಲೀಸರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ.
ವರದಿಗಳ ಪ್ರಕಾರ, ಶಾಲೆ ಸಮೀಪದ ಪೊದೆಗಳಲ್ಲಿ ಚೀಲಗಳನ್ನು ಕಂಡು ಪ್ರಾಂಶುಪಾಲರಿಗೆ ಸಂಶಯ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಎರಡು ತಂಡಗಳು ತಕ್ಷಣವೇ ಆಗಮಿಸಿವೆ. ಉಧಮ್ ಸಿಂಗ್ ನಗರ್ ಮತ್ತು ನೈನಿತಾಲ್ ಜಿಲ್ಲೆಗಳಿಂದ ಬಾಂಬ್ ನಿಯ ದಳ ಹಾಗೂ ಶ್ವಾನ ದಳಗಳನ್ನೂ ಕರೆಸಲಾಗಿದೆ. ಶ್ವಾನ ದಳದ ನೆರವಿನಿಂದ ಪೊದೆಗಳಲ್ಲಿ ಗಿಲಾಟಿನ್ ಕಡ್ಡಿಗಳ ಕೆಲ ಪೊಟ್ಟಣಗಳ್ನು ಶೋಧಿಸಲಾಯಿತು.
ಅಲ್ಲಿಂದ ೨೦ ಅಡಿ ದೂರದಲ್ಲಿ ಇನ್ನಷ್ಟು ಸ್ಫೋಟಕಗಳು ಸಿಕ್ಕಿವೆ. ಬಾಂಬ್ ನಿಷ್ಕ್ರಿಯ ದಳವು ಈ ಎಲ್ಲಾ ಸ್ಫೋಟಕಗಳ ಪ್ಯಾಕೆಟ್ ಗಳನ್ನು ಪಡೆದು, ಸೀಲ್ ಮಾಡಿ ಸುರಕ್ಷಿತ ಸ್ಥಳವೊಂದರಲ್ಲಿ ಇರಿಸಿದೆ. `ದಬರ ಗ್ರಾಮದ ಶಾಲೆಯೊಂದರ ಬಳಿಯ ಪೊದೆಗಳಲ್ಲಿ ೧೬೧ ಗಿಲಾಟಿನ್ ಸ್ಫೋಟಕ ಕಡ್ಡಿಗಳು ಸಿಕ್ಕಿವೆ. ಬಾಂಬ್ ನಿಷ್ಕ್ರಿಯ ದಳ ತನಿಖೆ ನಡೆಸಿದೆ. ಸಮೀಪದ ಪ್ರದೇಶಗಳಲ್ಲೂ ಸ್ಫೋಟಕಗಳ ಪತ್ತೆಗೆ ಶೋಧ ನಡೆಸಲಾಯಿತು’ ಎಂದು ಎಸ್ಎಸ್ಪಿ ದೇವೇಂದ್ರ ಪಿಂಚಾ ಅವರು ತಿಳಿಸಿದ್ದಾರೆ.



