ಬೆಂಗಳೂರು: ನಗರದ ಪ್ರತಿಷ್ಠಿತ ಸುಗಮ ಸಂಗೀತ ಸಂಸ್ಥೆಗಳಲ್ಲೊಂದಾದ ಪಂಚಾಮೃತ ಸುಗಮ ಸಂಗೀತ ಅಕಾಡಮಿಯು ಮಲ್ಲೇಶ್ವರದ ಶ್ರೀ ಯದುಗಿರಿ ಯತಿರಾಜ ಮಠದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಿಂಗಳ ನಿರಂತರ ಕಾರ್ಯಕ್ರಮ ‘ ಇಂಚರ-125″ ಮತ್ತು ಭಗವದ್ಗೀತೆ ಕನ್ನಡ ಕವಿಗಳು ಕಂಡಂತೆ ‘ ಬಿಂದು – 18’ ಯಶಸ್ವಿಯಾಗಿ ನಡೆಯಿತು.
ಶ್ರೀಮಠದ ಗುರುಗಳಾದ ಶ್ರೀಶ್ರೀ ರಾಮಾನುಜ ನಾರಾಯಣ ಜೀಯರ್ ರವರು ಕಾರ್ಯಕ್ರಮದಲ್ಲಿದ್ದು ಭಗವದ್ಗೀತೆಯಂತಹ ಶ್ರೇಷ್ಠ ಗ್ರಂಥದ ಪರಿಚಯವನ್ನು ಹೊಸರೀತಿಯಲ್ಲಿ ಮಾಡಿಕೊಡುತ್ತಿರುವುದನ್ನು ಮೆಚ್ಚಿ ನುಡಿದರು. ಸ್ವತಃ ಶ್ರೀಕೃಷ್ಣ ಪರಮಾತ್ಮನೇ ನುಡಿದ ವಾಣಿ ಗೀತೆ ಇದನ್ನು ಅನುಷ್ಠಾನ ಮಾಡದಿದ್ದರೂ ಜೊತೆಗಿಟ್ಟುಕೊಂಡರೂ ಸಾಕು ಫಲ ಸಿಗುತ್ತದೆ ಎಂದು ಭಕ್ತಿ ಹಾಗೂ ಶರಣಾಗತಿ ತತ್ವದ ಬಗ್ಗೆ ಉದಾಹರಣೆಗಳೊಂದಿಗೆ ವಿವರಿಸಿದರು.
ಪುತಿನ ರವರ ಗೋಕುಲ ನಿರ್ಗಮನ ನಾಟಕವನ್ನು ನೆನಪಿಸಿ ಭಗವಂತನ ಭಕ್ತ ಪರಾಧೀನತೆಯ ಬಗ್ಗೆ ತಿಳಿಸಿದರು. ಹದಿನೆಂಟು ತಿಂಗಳ ಈ ಯಾತ್ರೆ ಇಲ್ಲಿಗೆ ನಿಲ್ಲದೆ ಮತ್ತೊಂದು ರೀತಿಯಲ್ಲಿ ಮುಂದುವರೆಯಲೆಂದು ಆಶೀರ್ವದಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಹಿರಿಯ ವಕೀಲರೂ ಸಾಂಸ್ಕೃತಿಕ ಪೋಷಕರೂ ಆದ ಎಸ್ ಎಸ್ ರಾಮದಾಸ್ ರವರು ಈ ಸರಣಿಯ ಯಶಸ್ಸಿಗೆ ಶುಭ ಹಾರೈಸಿದರು. ಅಕಾಡಮಿಯ ಗೌರವಾಧ್ಯಕ್ಷರಾದ ಎ ಎಂ ಚಂದ್ರಶೇಖರರು ಮುಂದೆ ಮತ್ತೂ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದರು.
ನಂತರ ಭಗವದ್ಗೀತೆಯನ್ನು ಕುರಿತ ಪಠಣ. ಅರ್ಥ-ವಾಚನ-ಗಾಯನ- ಗಮಕ ವ್ಯಾಖ್ಯಾನ ನೆರವೇರಿತು.ಅಕ್ಷಯ್ ಎಂ ಭಾರದ್ವಾಜ್ (ಶ್ಲೋಕ) ನವ್ಯ ಪಿ (ಶ್ಲೋಕಾರ್ಥ) ಎಂ ವಿ ನಾರಾಯಣ್(ಗಮಕ ವಾಚನ), ಗಣೇಶ್ ದೇಸಾಯಿ(ಗಾಯನ) ಹಾಗೂ ಭ ರಾ ವಿಜಯಕುಮಾರ್ (ವಿಶ್ಲೇಷಣೆ) ನೀಡಿದರು. ಗೀತೆಯ 18 ನೇ ಅಧ್ಯಾಯದಲ್ಲಿ ಬರುವ ಮೋಕ್ಷತತ್ವವನ್ನೂ ಹಾಗೂ ಇಂದಿಗೆ ಅವುಗಳನ್ನು ಹೇಗೆ ಗ್ರಹಿಸಬೇಕೆಂಬುದನ್ನೂ ಸರಳವಾಗಿ ವಿವರಿಸಲಾಯಿತು.
ಕನ್ನಡದಲ್ಲಿನ ಮೂರು ಅಪೂರ್ವ ಗೀತಾನುವಾದದ ಕೃತಿಗಳಾದ ಕಳೆದ ಶತಮಾನದ ಪು ತಿ ನ ಮತ್ತು ಡಿ ವಿ ಜಿ ಹಾಗೂ ಲಕ್ಷ್ಮಣ ವಿರೂಪಾಕ್ಷ ಜೋಷಿಯವರ ಆಯ್ದ ಪದ್ಯಗಳನ್ನು ಗಮಕದಲ್ಲಿ ಪರಿಚಯಿಸಲಾಯಿತು.ಗಾಯತ್ರಿ ಕೇಶವರವರ ಮಾರ್ಗದರ್ಶನದಲ್ಲಿ ಅಕಾಡಮಿಯ ವಿದ್ಯಾರ್ಥಿಗಳು ಗೀತೆಯನ್ನು ಹಾಡಿದರು. ಶ್ರೀಮತಿ ಗಾಯತ್ರಿಕೇಶವರವರು ಪುತಿನ ರವರ “ನಿಲ್ಲಿಸದಿರು ವನಮಾಲಿ” ಗೀತೆಯನ್ನು ಹಾಗೂ ಗಣೇಶ್ ದೇಸಾಯಿಯವರು ಕನಕದಾಸರ “ನೀ ಮಾಯೆಯೊಳಗೊ” ಕೃತಿಯನ್ನು ಹಾಡಿದರು.
ಆರಂಭದಲ್ಲಿ ಸತ್ಯನಾರಾಯಣ ಮೂರ್ತಿ ಮತ್ತು ಕೇಶವಮೂರ್ತಿಯವರು ವೇದಘೋಷವನ್ನು ಮಾಡಿದರು. ಕವಿ ಭ ರಾ ವಿಜಯಕುಮಾರರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡಮಿಯ ಉಪಾಧ್ಯಕ್ಷರಾದ ಶ್ರೀ ಶ್ಯಾಮದತ್ತರವರು ನಿರೂಪಣೆಯನ್ನೂ ಕೇಶವಮೂರ್ತಿಯವರು ವಂದನಾರ್ಪಣೆಯನ್ನೂ ಮಾಡಿದರು.
ಹಿರಿಯ ಗಮಕಿಗಳಾದ ಜಿ ಎಸ್ ನಾರಾಯಣ್ ಹಾಗೂ ಶ್ರೀಮತಿ ಜಯರಾಂ, ಸಾಂಸ್ಕೃತಿಕ ಸಂಘಟಕ ಕೆ ಸಿ ರಮೇಶ್, ಉಪನ್ಯಾಸಕ ಶ್ರೀಪಾದರಾವ್ ಮಂಜುನಾಥ್, ಉಪನ್ಯಾಸಕಿ ಅರುಣಾ, ಕವಯಿತ್ರಿ ನಳಿನಿ”ಏನಂತೀರಿ” ಅಂಕಣ ಖ್ಯಾತಿಯ ಶ್ರೀಕಂಠ ಬಾಳಗಂಚಿ, ಕಲಾ ಪೆÇೀಷಕರಾದ ವೀಣಾ ಅಶೋಕ್ ಮತ್ತು ಅಶೋಕ್ ಮೊದಲಾಗಿ ಹಲವು ಕಲಾಸಕ್ತರು ಭಾಗವಹಿಸಿದ್ದರು.