ಮಕ್ಕಳ ಸಾಹಿತ್ಯ ಬೆಳೆಯಬೇಕಾದ ಅವಶ್ಯಕತೆ ಬಹಳವಿದೆ. ಮಕ್ಕಳಿಗೆ ನೀತಿ ಕಥೆಗಳ ಕೊರತೆ ಕಂಡುಬರುತ್ತಿದೆ. ಬರಹಗಾರರು ಇತ್ತ ಹೆಚ್ಚು ಗಮನ ಕೊಡುವುದು ಒಳ್ಳೆಯದು ಎಂದು ಪ್ರಸಿದ್ದ ಲೇಖಕಿ ಶ್ರೀಮತಿ ಮಧುರಾ ಕರಣಂ ಅಭಿಮತ ವ್ಯಕ್ತಪಡಿಸಿದರು. ಅವರು ಬೆಂಗಳೂರಿನ ಅಬಲಾಶ್ರಮದಲ್ಲಿ ಜರುಗಿದ ಕಸ್ತೂರಿ ಚಂದನವನದ ಪ್ರಥಮ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಾ ಗದ್ಯ ಸಾಹಿತ್ಯ ರಚನೆ ವಿಷಯದ ಬಗ್ಗೆ ತಿಳಿಸುತ್ತ ಗದ್ಯ ಸಾಹಿತ್ಯದಲ್ಲಿ ಯಾವುದೇ ನಿಯಮವಿಲ್ಲ ಅದು ನದಿಯಂತೆ ಹರಿಯುತ್ತಾ ಹೋಗುತ್ತದೆ.
ಕಥೆ,ನಾಟಕ, ಕಾದಂಬರಿ, ಜೀವನ ಚರಿತ್ರೆ, ಆತ್ಮಕಥೆ, ಅನುವಾದ, ಹಾಸ್ಯ ಲೇಖನ, ಲಲಿತಕಲೆ, ಹೀಗೆ ಗದ್ಯ ಪ್ರಕಾರಗಳು ಇನ್ನೂ ಅನೇಕ ಇವೆ. ಇವುಗಳನ್ನು ಬರೆಯಬೇಕಾದರೆ ಆಯಾ ವಿಷಯಕ್ಕೆ ಸಂಬಂಧಿಸಿದ ಪ್ರಕಾರ ಬರೆಯಬೇಕಾದರೆ ಬರವಣಿಗೆ ಕಡಿಮೆ ಹೆಚ್ಚು ಇರುತ್ತದೆ. ಹಾಗೂ ಅದಕ್ಕೆ ಆದ ಒಂದು ಚೌಕಟ್ಟು ಇರುತ್ತದೆ. ಇದು ಆಡು ಭಾಷೆಯಲ್ಲಿ ಸರಳ ಪದಗಳಲ್ಲಿ ಕಾಣಬಹುದು. ಸಾಹಿತ್ಯಕ್ಕೆ ಗದ್ಯದ ಕೊಡುಗೆ ಅಪಾರ ಎಂದು ತಿಳಿಸುತ್ತ
ಅನೇಕ ಲೇಖಕರು ,ಲೇಖಕಿಯರು ಕವಿಗಳು ಬರೆದಿರುವ ಗದ್ಯ ಸಾಹಿತ್ಯದ ಕಥೆ ನಾಟಕ ಕಾದಂಬರಿ ಹಾಸ್ಯ ಲೇಖನ ಅನುವಾದ ಪ್ರವಾಸ ಕಥನ, ಹೀಗೆ ಅನೇಕರು ಬರೆದಿರುವ ಪುಸ್ತಕಗಳನ್ನು ತಿಳಿಸುತ್ತಾ ಅವರುಗಳ ಕೊಡುಗೆಯನ್ನು ಪ್ರಶಂಸಿಸಿದರು. ಗದ್ಯದಲ್ಲಿ ಬರೆಯಲು ಅವಕಾಶಗಳು ಅಧಿಕವಾಗಿದ್ದು ಬರಹಗಾರರು ಹೆಚ್ಚು ಗದ್ಯ ಪ್ರಕಾರಕ್ಕೆ ಮಹತ್ವ ನೀಡಿ ,ಗದ್ಯ ಬರಹಗಾರರಾಗಿ ಎಂದು ಹೇಳಿದ ಅವರು ಕಸ್ತೂರಿ ಚಂದನವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಂದನವನದ ಶ್ರೀಮತಿ ಮಾಧುರಿ ದೇಶಪಾಂಡೆ ಹಾಗೂ ಎಲ್ಲಾ ನಿರ್ವಾಹಕರ ಸಾಹಿತ್ಯ ಆಸಕ್ತಿ ಹಾಗೂ ಅವರುಗಳ ಪರಿಶ್ರಮ ಮೆಚ್ಚಲೇಬೇಕು ಚಂದನವನ ಒಂದು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.
ಇದೇ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬರಹಗಾರರು ಹಾಗೂ ಹವ್ಯಾಸಿ ಪತ್ರಕರ್ತರು ಆದ ಶ್ರೀ ಗುರುರಾಜ್ ಪೋಶೆಟ್ಟಿಹಳ್ಳಿ ಅವರು ಮುದ್ರಣಗೊಳ್ಳುವ ಗುಣಮಟ್ಟದ ಲೇಖನಗಳನ್ನು ಬರೆಯುವ ಬಗೆ ಎಂಬ ವಿಷಯ ಕುರಿತು ಮಾತನಾಡಿದ ಅವರು ಬರವಣಿಗೆಯು ಸರಳ ವಾಕ್ಯಗಳಲ್ಲಿ ಇರಬೇಕು ಜನಸಾಮಾನ್ಯರ ಮನಮುಟ್ಟುವಂತೆ ಬರೆಯಬೇಕು. ಕ್ಲಿಷ್ಟಕರ ಪದಗಳನ್ನು ಬಳಸಿ ಅದಕ್ಕೆ ಅರ್ಥ ಹುಡುಕುವ ಕೆಲಸ ಓದುಗರಿಗೆ ಆಗಬಾರದು. ಪತ್ರಿಕೆಗಳು ಜ್ಞಾನ ಪ್ರಸಾರ ಮಾಡುವ ಮೂಲಕ ತನ್ನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿವೆ.
ಉದಯೋನ್ಮುಖ ಬರಹಗಾರರು ಮೊದಲು ಸಣ್ಣ ಪತ್ರಿಕೆಗಳಲ್ಲಿ ಬರೆಯುವುದನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು. ಹೀಗೆ ಬರೆಯುತ್ತ ತಮ್ಮ ಬರವಣಿಗೆಯಲ್ಲಿ ಯಶಸ್ಸು ಕಾಣಬಹುದು ಕಲಿಯುವುದು ಬಹಳಷ್ಟಿದೆ. ಹಂತ ಹಂತವಾಗಿ ಸಾಗಬೇಕು. ಬರೆಯುವಾಗ ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುವುದು ಅಗತ್ಯ. ಬರೆಯುವಾಗ ಬೇರೆ ಬೇರೆ ಆಯಾಮಗಳಲ್ಲಿ ನೋಡಿ ಬರೆಯಬೇಕು. ಬರಹಗಾರರಿಗೆ ಪತ್ರಿಕೆಗಳಲ್ಲಿ ಅವಕಾಶಗಳು ಅಧಿಕವಾಗಿದ್ದು ಬರಹಗಾರರು ಇದನ್ನು ಉಪಯೋಗಿಸಿಕೊಳ್ಳಬೇಕು.
ಮುಖ್ಯವಾಗಿ ಬರಹಗಾರರು ಅಧ್ಯಯನ ಮಾಡುವುದು ಬಹಳ ಆವಶ್ಯಕ ಎಂದು ಹೇಳಿದ ಅವರು ಈ ಕಸ್ತೂರಿ ಚಂದನವನ ಬರಹಗಾರರಿಗೆ ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಯಶಸ್ಸು ಕಾಣುತ್ತಿದೆ. ಶ್ರೀಮತಿ ಮಾಧುರಿ ದೇಶಪಾಂಡೆ ಹಾಗೂ ಎಲ್ಲಾ ನಿರ್ವಾಹಕರ ಆಸಕ್ತಿ ಪರಿಶ್ರಮ ಹಾಗೂ ಎಲ್ಲಾ ಸದಸ್ಯರ ಉತ್ತೇಜನ ಸಹಕಾರ ನೋಡಿ ತುಂಬಾ ಸಂತೋಷವಾಯಿತು ಎಂದರು.
ಇದೇ ಸಂದರ್ಭದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ಸಾಹಿತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿತು.ಕಸ್ತೂರಿ ಚಂದನವನದ ಬಗ್ಗೆ ಶ್ರೀಮತಿ ಮಾಧುರಿ ದೇಶಪಾಂಡೆ ತಿಳಿಸಿದರು. ಶ್ರೀಮತಿ ಚಂಪಾ ಚಿನಿವಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಅನಿತಾ.ಪಿ.ಕೆ. ಹಾಗೂ ಶ್ರೀಮತಿ ಚಂಪಾ ಚಿನಿವಾರ್ ಪ್ರಾರ್ಥನೆ ಮಾಡಿದರೆ ಶ್ರೀಮತಿ ಅನಿತಾ.ಪಿ.ಕೆ. ಸ್ವಾಗತಿಸಿದರು. ಶ್ರೀಮತಿ ವಿದ್ಯಾ ಚಂದ್ರು ಎಲ್ಲರಿಗೂ ವಂದಿಸಿದರು.