ಬೆಂಗಳೂರು: ಈ ಬಾರಿಯ ಅಧಿವೇಶನವನ್ನು ಸಿಎಂ ಸಿದ್ಧರಾಮಯ್ಯ ಹಾಗೂ ಸರ್ಕಾರ ಸುಳ್ಳು ಮಾಹಿತಿ ನೀಡಲು ಬಳಸಿಕೊಂಡಿದೆ ಎಂದು ಬಿಜೆಪಿ ಮುಖಂಡ ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾಶ್ರೀನಿವಾಸ್ ಪೂಜಾರಿ ಆರೋಪಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ. ಅಲ್ಲೂ ಇಲ್ಲೋ ನಡೆಯುತ್ತಿದ್ದ ಘಟನೆ ವಿಧಾನಸೌಧದಲ್ಲಿ ನಡೆದಿರುವುದು ನೋವಿನ ಸಂಗತಿ ಅಂದರೆ, ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧದಲ್ಲಿ ಘೋಷಣೆ ಮೊಳಗಿದೆ.
ಘಟನೆ ನಡೆದು 60 ಘಂಟೆ ಕಳೆದಿದೆ. ಈವರೆಗೂ ಯಾರನ್ನು ಬಂಧಿಸಿಲ್ಲ. ಇಡೀ ಸಚಿವ ಸಂಪುಟ ಘೋಷಣೆ ಪರ ಕೂಗಿದವರ ಪರವಿದ್ದಾರೆ. ನೀವು ಶತ್ರು ರಾಷ್ಟ್ರ ಅನ್ನುವುದನ್ನು ಒಪ್ಪಿಕೊಳ್ಳಿ ಎಂದರೆ, ಅದು ನಮ್ಮ ನೆರೆ ರಾಷ್ಟ್ರ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಾವು ರಾಜ್ಯಪಾಲರನ್ನು ಭೇಟಿಯಾಗಿದ್ದೇವೆ. ಅವರು ನಮಗೆ ನ್ಯಾಯ ಕೊಡಿಸುವ ಭರವಸೆ ಕೊಡಿಸುತ್ತೇನೆ ಎಂದಿದ್ದಾರೆ. ಅದು ನಮಗೆ ತೃಪ್ತಿ ತಂದಿದೆ ಎಂದು ಕೋಟಾ ಶ್ರೀನಿವಾಸಪೂಜಾರಿ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ನಾಸೀರ್ ಹುಸೇನ್ ಎಂಬುವವರು ಇದನ್ನು ಖಂಡಿಸುವ ಕೆಲಸ ಮಾಡಿಲ್ಲ. ಸಿಎಂ ನಿನ್ನೆ ಅನ್ನಭಾಗ್ಯದ ಕಾರ್ಯಕ್ರಮವೊಂದು ಮಾಡಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ತಿಂಗಳು 22 ಲಕ್ಷ ಕ್ವಿಂಟಾಲ್ ಅಕ್ಕಿ ಕಳುಹಿಸುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಡುವ ಅಕ್ಕಿಯಿಂದ ಅನ್ನಭಾಗ್ಯ ಕಾರ್ಯಕ್ರಮ ಮಾಡಿದ್ದಾರೆ. ಬಿಜೆಪಿ ಸಂವಿಧಾನ ವಿರೋಧಿ ಅಂತಾರೆ.
ಮೊನ್ನೆ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಸಂವಿಧಾನದ ಸಭೆ ನಡೆಸಿದ್ದಾರೆ. ನಿತಾಶ ಕೌಲ್ ಎಂಬವರನ್ನು ವಿದೇಶದಿಂದ ಕರೆಸಿ ಭಾಷಣ ಮಾಡಿಸಲು ಮುಂದಾಗಿದ್ದರು. ಸಂವಿಧಾನಕ್ಕೆ ಮೋಸ ಮಾಡಿದವರು ಯಾರಾದ್ರೂ ಇದ್ದರೇ, ಅದು ಕಾಂಗ್ರೆಸ್ನವರು ಎಂದು ದೂರಿದರು.
ಕಾಶ್ಮೀರದಲ್ಲಿ 370 ರದ್ದು ಮಾಡುವವರೆಗೂ ಮೀಸಲಾತಿ ಇರಲಿಲ್ಲ. ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ 370 ರದ್ದಾದ ಮೇಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ 500 ಮೀ ರಸ್ತೆ ಹಾಕಲು ದುಡ್ಡಿಲ್ಲ. ಶಾಸಕರು ಗೆದ್ದವರು ಬೇಸರದಲ್ಲಿದ್ದಾರೆ. ಒಂದೇ ಒಂದು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಇಡೀ ಸದನದಲ್ಲಿ ಸುಳ್ಳು ಹೇಳಲು ಸರ್ಕಾರ ಬಳಕೆ ಮಾಡಿಕೊಂಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.