ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿಜೆ ರಾಯ್ ಅವರು ತಮ್ಮ ಕಚೇರಿಯಲ್ಲಿಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಹೊಸೂರು ರಸ್ತೆಯ ಲ್ಯಾಂಗ್ ಫರ್ಡ್ ಟೌನ್ ನಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಂಪನಿಯಲ್ಲಿ ಶೋಧ ನಡೆಸುತ್ತಿದ್ದರು. ಈ ವೇಳೆ ರಾಯ್ ಅವರು ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಗುಂಡೇಟಿನ ಸದ್ದು ಕೇಳಿದ ಕೂಡಲೇ ಸಿಬ್ಬಂದಿ ಅವರ ಕೋಣೆಗೆ ಧಾವಿಸಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಗುಂಡಿನ ದಾಳಿ ಘಟನೆ ಸಂಭವಿಸಿದೆ. ಮೇಲ್ನೋಟಕ್ಕೆ, ಕಾನ್ಫಿಡೆಂಟ್ ಗ್ರೂಪ್ ನ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿಜೆ ರಾಯ್ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ತೋರುತ್ತದೆ. ಅವರ ಮೃತದೇಹ ಎಚ್ಎಸ್ಆರ್ ಲೇಔಟ್ ನ ನಾರಾಯಣ ಆಸ್ಪತ್ರೆಯಲ್ಲಿದೆ” ಎಂದು ಸಿಂಗ್ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು. ನಿನ್ನೆ ಮಧ್ಯಾಹ್ನ 3 ರಿಂದ 3.30 ರ ನಡುವೆ ಈ ಘಟನೆ ನಡೆದಿದೆ ಎಂದು ಆಯುಕ್ತರು ಹೇಳಿದ್ದಾರೆ.
ಈ ಸಂಬಂಧ ಕಾನ್ಫಿಡೆಂಟ್ ಗ್ರೂಪ್ನ ನಿರ್ದೇಶಕರು ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದರು.



